ಕೇರಳ : ತಾಯಿಯೋರ್ವಳು ಆತ್ಮಹತ್ಯೆಗೆಂದು ತಂದಿಟ್ಟಿದ್ದ ವಿಷಮಿಶ್ರಿತ ಐಸ್ ಕ್ರೀಮ್ ಸೇವಿಸಿ ಆಕೆಯ ಪುತ್ರ ಹಾಗೂ ಸಹೋದರಿ ಪ್ರಾಣ ಕಳೆದುಕೊಂಡ ಘಟನೆ ಕೇರಳದ ಕಾಸರಗೋಡಿನ ಕನ್ಹಂಗಡ್ ನಲ್ಲಿ ನಡೆದಿದೆ.
ಫೆ.11 ರಂದು 25 ವರ್ಷ ವಯಸ್ಸಿನ ವರ್ಷಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಐಸ್ ಕ್ರೀಮ್ ನಲ್ಲಿ ಇಲಿ ಪಾಷಾಣ ಬೇರೆಸಿ ಸ್ವಲ್ಪ ಸೇವಿಸಿ ಟೇಬಲ್ ಮೇಲಿಟ್ಟು ಬಾತ್ ರೂಂಗೆ ತೆರಳಿದ್ದಳು. ಈ ವೇಳೆ ಆಕೆಯ 5 ವರ್ಷದ ಪುತ್ರ ಅದ್ವೈತ್ ಹಾಗೂ ಆಕೆಯ ಸಹೋದರಿ 19 ವರ್ಷದ ದೃಶ್ಯಾ ಅದೇ ಐಸ್ ಕ್ರೀಮ್ ತಿಂದಿದ್ದರು. ಬಳಿಕ ಮನೆಯವರೆಲ್ಲರು ಬಿರಿಯಾನಿ ತಿಂದು ಮಲಗಿದ್ದರು.
ರಾತ್ರಿ ವೇಳೆ ಅದ್ವೈತ್ ಹಾಗೂ ದೃಶ್ಯಾ ಆರೋಗ್ಯದಲ್ಲಿ ಏರುಪೇರಾಗಿ ವಾಂತಿ ಶುರುವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಫೆ.12 ರ ಮುಂಜಾನೆ ಆ ಬಾಲಕ ಸಾವನ್ನಪ್ಪಿದ್ದ. ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ದೃಶ್ಯಾ ನಿನ್ನೆ (ಫೆ.24) ಮುಂಜಾನೆ ಅಸುನೀಗಿದ್ದಳು. ಬಿರಿಯಾನಿ ತಿಂದಿದ್ದರಿಂದಲೇ ಈ ಸಾವು ಸಂಭವಿಸಿರಬಹುದು ಎಂದು ಎಲ್ಲರ ಊಹೆಯಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಇಲಿ ಪಾಷಾಣ ಕಾರಣ ಎನ್ನುವುದು ಬೆಳಕಿಗೆ ಬಂದಿದೆ.
ಸುಮ್ಮನಿದ್ದಳೇಕೆ ವರ್ಷಾ :
ವರ್ಷಾ ವಿಷಮಿಶ್ರಿತ ಐಸ್ ಕ್ರೀಮ್ ಹೆಚ್ಚು ತಿಂದಿರಲಿಲ್ಲ. ಹೀಗಾಗಿ ಅವಳಿಗೆ ಏನೂ ತೊಂದರೆ ಯಾಗಿರಲಿಲ್ಲ. ತನ್ನ ಮಗ ಹಾಗೂ ತಂಗಿ ಐಸ್ ಕ್ರೀಮ್ ತಿಂದು ಅಸ್ವಸ್ಥಗೊಂಡಿದ್ದರೂ ಕೂಡ ವರ್ಷಾ ಸತ್ಯ ಬಾಯಿ ಬಿಟ್ಟಿರಲಿಲ್ಲ. ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ ವಿಷಯ ಬಹಿರಂಗವಾದೀತು ಎನ್ನುವ ಭಯದಲ್ಲಿ ಸುಮ್ಮನಿದ್ದಳು. ಮಗ ಹಾಗೂ ಸಹೋದರಿಯ ಪೋಸ್ಟ್ ಮಾರ್ಟಂ ವರದಿ ನಂತರ ಐಸ್ ಕ್ರೀಮ್ ನಲ್ಲಿ ಇಲಿ ಪಾಷಾಣ ಬೇರೆಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಪೊಲೀಸರ ಎದುರು ಹೇಳಿಕೊಂಡಿದ್ದಾರೆ. ಆದರೆ, ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು ಎಂಬುದನ್ನು ಹೊರಹಾಕಿಲ್ಲ.
ಗಂಡನ ಮನೆಯಿಂದ ತಾಯಿ ಜತೆಗೆ ಇರಲು ಕನ್ಹಂಗಡ್ ಗೆ ಬಂದಿದ್ದ ವರ್ಷಾ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದು ಏಕೆ ಎನ್ನುವ ಪ್ರಶ್ನೆ ಅವರ ಮನೆಯವರಲ್ಲಿ ಉದ್ಭವಿಸಿದೆ. ಸದ್ಯ ಪೊಲೀಸರು ವರ್ಷಾ ವಿರುದ್ಧ ದೂರು ದಾಖಲಿಸಿಕೊಂಡು ತಮ್ಮ ವಶಕ್ಕೆ ಪಡೆದಿದ್ದಾರೆ.