Advertisement

ಹೈಕೋರ್ಟ್ ತಪರಾಕಿ ಬಳಿಕ ಕೇರಳ ಸಾರಿಗೆ ಸಚಿವ ಚಾಂಡಿ ರಾಜೀನಾಮೆ

01:38 PM Nov 15, 2017 | Team Udayavani |

ತಿರುವನಂತಪುರಂ:ಭೂ ಅತಿಕ್ರಮಣ ನಡೆಸಿದ ಪ್ರಕರಣದಲ್ಲಿ ಸಿಲುಕಿದ್ದ ಸಾರಿಗೆ ಸಚಿವ ಥೋಮಸ್ ಚಾಂಡಿ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರೊಂದಿಗೆ ಪಿಣರಾಯಿ ನೇತೃತ್ವದ ಎಡರಂಗ ಸರ್ಕಾರದ ಮೂರನೇ ಸಚಿವರು ನಿರ್ಗಮನವಾದಂತಾಗಿದೆ.

Advertisement

ಪಿಣರಾಯಿ ಸರ್ಕಾರದ ಶ್ರೀಮಂತ ಸಚಿವ ಥೋಮಸ್ ಚಾಂಡಿ, ಅಫಿಡವಿತ್ ನಲ್ಲಿ 92 ಕೋಟಿ ರೂಪಾಯಿ ಸಂಪತ್ತು ಘೋಷಿಸಿಕೊಂಡಿರುವುದಾಗಿ ವರದಿ ವಿವರಿಸಿದೆ. ಅಲ್ಲದೇ ಕೇರಳದ ಅಲಾಪ್ಪುಝಾದಲ್ಲಿ ಲೇಕ್ ಪ್ಯಾಲೇಸ್ ರೆಸಾರ್ಟ್ ಅನ್ನು ಅಕ್ರಮವಾಗಿ ನಿರ್ಮಿಸಿಕೊಂಡಿರುವ ಆರೋಪ ಎದುರಿಸುತ್ತಿರುವುದಾಗಿ ವರದಿ ತಿಳಿಸಿದೆ.

ಅಲಾಪ್ಪುಝಾ ಜಿಲ್ಲಾಧಿಕಾರಿ ಕೇರಳ ಹೈಕೋರ್ಟ್ ನಲ್ಲಿ ಸಚಿವ ಥೋಮಸ್ ಚಾಂಡಿ ವಿರುದ್ಧ ದೂರು ದಾಖಲಿಸಿದ್ದರು. ಏತನ್ಮಧ್ಯೆ ಸಚಿವ ಚಾಂಡಿ ಸರ್ಕಾರದ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದರು. ಜಿಲ್ಲಾಧಿಕಾರಿಯವರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿರುವುದಾಗಿ ಚಾಂಡಿ ಆರೋಪಿಸಿದ್ದರು. ಅಲ್ಲದೇ ಕೇರಳ ಹೈಕೋರ್ಟ್ ಮಂಗಳವಾರ ಚಾಂಡಿ ಅವರ ಅರ್ಜಿಯನ್ನು ವಜಾಗೊಳಿಸಿ, ತರಾಟೆಗೆ ತೆಗೆದುಕೊಂಡಿತ್ತು. ಇದರೊಂದಿಗೆ ಜಿಲ್ಲಾಧಿಕಾರಿಯವರ ವರದಿಯ ಅಂಶವನ್ನು ಎತ್ತಿಹಿಡಿದಿತ್ತು.

ಚಾಂಡಿ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಪಕ್ಷದ ಶಾಸಕರಾಗಿದ್ದು, ಕಳೆದ ವರ್ಷ ಕೇರಳದಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಎಲ್ ಡಿಎಫ್ ಮೈತ್ರಿಕೂಟಕ್ಕೆ ಎನ್ ಸಿಪಿ ಬೆಂಬಲ ನೀಡಿತ್ತು. 

ಈ ಹಿಂದೆ ಸಂಬಂಧಿಕರಿಗೆ ಸರಕಾರೀ ಹುದ್ದೆ ನೀಡಿದ ಆರೋಪದಂತೆ ಸಿಪಿಎಂ ಸಚಿವ ಜಯರಾಜನ್ ರಾಜೀನಾಮೆ ನೀಡಿದ್ದರು. ಲೈಂಗಿಕ ಹಗರಣದಲ್ಲಿ ಎನ್.ಸಿ.ಪಿ.ಯ ಎ.ಕೆ.ಶಶೀಂದ್ರನ್ ರಾಜೀನಾಮೆ ನೀಡಿದ್ದರು. ಶಶೀಂದ್ರರು ರಾಜೀನಾಮೆ ನೀಡಿದ ಹುದ್ದೆಗೆ ಅದೇ ಪಕ್ಷದ ಥೋಮಸ್ ಚಾಂಡಿ ಸಚಿವರಾಗಿ ಸೇರ್ಪಡೆಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next