ಮದ್ದೂರು: ರಾಜ್ಯದಲ್ಲಿ 12 ವರ್ಷಗಳಿಂದ ಲಾಟರಿ ನಿಷೇಧವಿದೆ. ಆದರೂ, ಕೇರಳದ ಲಾಟರಿಗಳು ಪಟ್ಟಣ ದೊಳಗೆ ಸದ್ದಿಲ್ಲದೆ ಸರಾಗವಾಗಿ ಮಾರಾಟ ವಾಗುತ್ತಿವೆ. ಪಟ್ಟಣದ ಜನರೂ ಲಾಟರಿಗೆ ಆಕರ್ಷಿತರಾಗಿ ಅದೃಷ್ಟ ಪರೀಕ್ಷೆಗೆ ಮುಗಿಬಿದ್ದಿದ್ದಾರೆ. ಪಟ್ಟಣದ ಹೂವಿನ ಮಾರುಕಟ್ಟೆಯಲ್ಲಿ ಕಳೆದ 5-6 ತಿಂಗಳಿಂದಲೂ ಕೇರಳ ಲಾಟರಿ ಟಿಕೆಟ್‌ಗಳು ಎಗ್ಗಿಲ್ಲದೆ ಮಾರಾಟವಾಗುತ್ತಿವೆ.
ಪೊಲೀಸರಿಗೆ ಸತ್ಯ ಗೊತ್ತಿದ್ದರೂ ಕಂಡೂ ಕಾಣದಂತಿದ್ದಾರೆ. ಲಾಟರಿ ವ್ಯಾಮೋಹಕ್ಕೆ ಒಳಗಾಗಿರುವ ಜನರು ದಿನದಿಂದ ದಿನಕ್ಕೆ ಹೆಚ್ಚು ಹಣ ತೊಡಗಿಸುತ್ತಿದ್ದಾರೆ. ಲಾಟರಿ ತರೋದು ಹೇಗೆ? ಬೆಂಗಳೂರಿ ನಿಂದ ನಿತ್ಯವೂ ಕೇರಳಕ್ಕೆ ಲಾರಿ ಗಳಲ್ಲಿ ಸರಕುಗಳನ್ನು ಕೊಂಡೊಯ್ಯಲಾಗುತ್ತಿದೆ. ಅವೆಲ್ಲವೂ ಮದ್ದೂರು ಮಾರ್ಗವಾಗಿ ಮೈಸೂರು ಮೂಲಕ ಹಾದು ಹೋಗುತ್ತಿವೆ. ಈ ಲಾರಿ ಚಾಲಕರು ಅಥವಾ ಕೇರಳದಲ್ಲಿ ರುವವರ ಸಂಪರ್ಕ ಬೆಳೆಸಿಕೊಂಡಿ ರುವ ಸ್ಥಳೀಯರು ಸರಕುಗಳನ್ನು ಕೊಂಡೊಯ್ಯುವ ಸಮಯದಲ್ಲಿ ತಮಗೆ ಬೇಕಾದ ಅಂಕಿಗಳನ್ನು ಗುರುತಿಸಿ ಬರೆದುಕೊಡುತ್ತಾರೆ. ಲಾಟರಿ ಟಿಕೆಟ್‌ನಲ್ಲಿರುವ ಸಂಖ್ಯೆಗಳಲ್ಲಿ ಕೊನೆಯ ಅಂಕಿಗಳನ್ನು ಅದೃಷ್ಟದ ಸಂಖ್ಯೆಗಳನ್ನಾಗಿಸಿಕೊಂಡಿರುತ್ತಾರೆ.
ಸ್ಥಳೀಯ ವ್ಯಕ್ತಿಗೆ ಕಮಿಷನ್: ಯಾರೂ ಸಿಗದಿದ್ದ ಪಕ್ಷದಲ್ಲಿ ಸ್ಥಳೀಯವಾಗಿ ನಂಬಿಕೆ ಇರುವ ವ್ಯಕ್ತಿಯೊಬ್ಬರಿಗೆ ದುಡ್ಡು ಕೊಟ್ಟು ಕೇರಳಕ್ಕೆ ಕಳುಹಿಸಿ, ಅಲ್ಲಿಂದ ಲಾಟರಿ ಟಿಕೆಟ್ ಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಟಿಕೆಟ್‌ಗಳನ್ನು ತಂದುಕೊಡುವ ವ್ಯಕ್ತಿಗೆ ಕಮಿಷನ್ ಹಣ ನೀಡುತ್ತಿದ್ದಾರೆ ಎಂದು ಮಾಹಿತಿ ಬಹಿರಂಗಗೊಂಡಿದೆ. ಕೇರಳಕ್ಕೆ ಸರಕು ತೆಗೆದುಕೊಂಡು ಹೋದ ಸಮಯದಲ್ಲಿ ಚಾಲಕರು ಅಥವಾ ವ್ಯಕ್ತಿಗಳು ಸ್ಥಳೀಯರು ಬರೆದುಕೊಟ್ಟ ಸಂಖ್ಯೆಗಳಿರುವ ಲಾಟರಿಗಳನ್ನು ಆಯ್ದುಕೊಂಡು ಇಲ್ಲಿಗೆ ತರುತ್ತಾರೆ. ನಂತರ ದುಡ್ಡು ಕೊಟ್ಟವರಿಗೆ ಟಿಕೆಟ್‌ಗಳನ್ನು ಹಂಚಿ ಹೋಗುತ್ತಾರೆ.
ಈ ಮೂಲಕ ನೂರಾರು ಕೇರಳ ರಾಜ್ಯದ ಲಾಟರಿಗಳು ಕರ್ನಾಟಕ ಪ್ರವೇಶಿಸುತ್ತಿವೆ. ಲಾಟರಿ ಆಕರ್ಷಣೆಗೊಳಗಾಗಿರುವ ಜನರೂ ಸಹ ನಿರಂತರವಾಗಿ ಇದರಲ್ಲಿ ಹಣ ತೊಡಗಿಸುತ್ತಿದ್ದಾರೆ. ಹೂ ಮಾರುಕಟ್ಟೆಯಲ್ಲಿ ಟಿಕೆಟ್ ಮಾರಾಟ: ಲಾಟರಿ ಟಿಕೆಟ್‌ಗಳ ಫಲಿತಾಂಶವನ್ನು ಕೇರಳ ಪತ್ರಿಕೆಗಳು ಹಾಗೂ ವೆಬ್‌ಸೈಟ್ ಮೂಲಕ ತಿಳಿದುಕೊಳ್ಳುತ್ತಿದ್ದಾರೆ.
ನೂರಾರು ಲಾಟರಿಗಳು ಈ ಮೂಲಕವಾಗಿ ಮಾರಾಟವಾಗುತ್ತಿವೆ. ಆದರೂ ಈ ದಂಧೆ ತಡೆಯುವುದಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲ. ಇದರಿಂದ ಹೂವಿನ ಮಾರುಕಟ್ಟೆ ಕೇರಳ ಲಾಟರಿ ಟಿಕೆಟ್‌ಗಳ ಮಾರಾಟದ ಕೇಂದ್ರವಾಗಿ ರೂಪುಗೊಂಡಿದೆ. ಕೇರಳ ಲಾಟರಿ ಆಕರ್ಷಣೆ ಗೊಳಗಾಗಿರುವವರು ತಾವು ದುಡಿದ ಹಣವನ್ನೆಲ್ಲಾ ಲಾಟರಿಗೆ ಸುರಿಯುತ್ತಿದ್ದಾರೆ.
ಇದರಿಂದ ಪಟ್ಟಣದ ಹಲವು ಕುಟುಂಬಗಳು ಬೀದಿಪಾಲಾಗುವ ಸ್ಥಿತಿ ಎದುರಾಗಿದೆ. ಲಾಟರಿ ನಿಷೇಧದ ಬಳಿಕ ಅದರಿಂದ ದೂರ ಉಳಿದಿದ್ದ ನನ್ನ ಗಂಡ ಇದೀಗ ಕೇರಳ ಲಾಟರಿ ಚಟಕ್ಕೆ ಬಲಿಯಾಗಿದ್ದಾನೆ. ದುಡಿದ ಹಣವನ್ನೆಲ್ಲಾ ಅದಕ್ಕೆ ಸುರಿಯುತ್ತಿದ್ದು, ಇದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸಂಬಂಧಿಸಿದವರು ಕೂಡಲೇ ಇದರ ಬಗ್ಗೆ ಕ್ರಮ ವಹಿಸಬೇಕು ಎಂದು ಮಹಿಳೆಯೊಬ್ಬರು ದುಃಖತಪ್ತರಾಗಿ ಹೇಳಿದರು.
ಕೇರಳ ಲಾಟರಿಗಳು ಮಾರಾಟವಾಗುತ್ತಿರುವುದು ಇದುವರೆಗೂ ನಮ್ಮ ಗಮನಕ್ಕೆ ಬಂದಿಲ್ಲ. ಹೂವಿನ ಮಾರುಕಟ್ಟೆ ಯಲ್ಲಿ ಮಾರಾಟ ವಾಗುತ್ತಿವೆ ಎನ್ನುವುದು ಈಗ ಗಮನಕ್ಕೆ ಬಂದಿದೆ. ಅಂತಹ ದಂಧೆ ನಡೆಯುತ್ತಿದ್ದರೆ, ನಿರ್ದಾಕ್ಷಿಣ್ಯವಾಗಿ ದಾಳಿ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು.
–ಮಂಜೇಗೌಡ,ಪಿಎಸ್‌ಐ, ಮದ್ದೂರು ಪಟ್ಟಣ ಠಾಣೆ