ಕಾಸರಗೋಡು: ಪ್ರಸ್ತುತ ವರ್ಷದ ಹೈಯರ್ ಸೆಕೆಂಡರಿ ಹಾಗೂ ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷಾ ಫಲಿತಾಂಶವನ್ನು ಕೇರಳ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಗುರುವಾರ ಪ್ರಕಟಿಸಿದರು.
ಹೈಯರ್ ಸೆಕೆಂಡರಿಯಲ್ಲಿ ಶೇ. 82.95 ಮಂದಿ ಹಾಗೂ ವಿಎಚ್‌ಎಸ್‌ಇಯಲ್ಲಿ ಶೇ. 78.39 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಳೆದ ವರ್ಷಕ್ಕಿಂತ ಫಲಿತಾಂಶ ಕಡಿಮೆಯಾಗಿದೆ. 2022ರಲ್ಲಿ ಶೇ. 83.87 ಮಂದಿ ತೇರ್ಗಡೆಯಾಗಿದ್ದರು. ಈ ಬಾರಿ 4,32,436 ಮಂದಿ ವಿದ್ಯಾರ್ಥಿಗಳಲ್ಲಿ 3,12,005 ಮಂದಿ ತೇರ್ಗಡೆಯಾಗಿದ್ದಾರೆ. ಅತ್ಯಂತ ಹೆಚ್ಚು ಫಲಿತಾಂಶ ಎರ್ನಾಕುಲಂ ಜಿಲ್ಲೆಯಲ್ಲಿ ಶೇ. 87.55 ಮತ್ತು ಅತ್ಯಂತ ಕಡಿಮೆ ಪತ್ತನಂತಿಟ್ಟ ಜಿಲ್ಲೆಯಲ್ಲಿ ಶೇ. 76.59 ಬಂದಿದೆ. 77 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ.
8 ಸರಕಾರಿ ಶಾಲೆ, 25 ಅನುದಾನಿತ ಶಾಲೆ ಹಾಗೂ 32 ಅನುದಾರಹಿತ ಶಾಲೆ, 12 ವಿಶೇಷ ಶಾಲೆಗಳಲ್ಲಿ ಶೇ. 100 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಶೇ. 87.31, ಹ್ಯುಮಾನಿಟಿಸ್‌ನಲ್ಲಿ ಶೇ. 71.93, ಕಾಮರ್ಸ್‌ನಲ್ಲಿ ಶೇ. 82.75 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.