Advertisement

ಈ ಬಾರಿ UPSCಗೆ 1016 ಮಂದಿ ಆಯ್ಕೆ: ಲಕ್ನೋದ ಟೆಕಿ ಆದಿತ್ಯ ಶ್ರೀವಾಸ್ತವಗೆ ಮೊದಲ ರ್‍ಯಾಂಕ್‌

10:17 AM Apr 17, 2024 | Team Udayavani |

ಹೊಸದಿಲ್ಲಿ: 2023ನೇ ಸಾಲಿನ ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ) ಪರೀಕ್ಷೆಯ ಫ‌ಲಿತಾಂಶವು ಮಂಗಳವಾರ ಪ್ರಕಟವಾಗಿದ್ದು, ಆದಿತ್ಯ ಶ್ರೀವಾಸ್ತವ ಅವರು ಮೊದಲ ರ್‍ಯಾಂಕ್‌ ಗಳಿಸಿದ್ದಾರೆ. ಅದೇ ರೀತಿ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನ ಕ್ರಮವಾಗಿ ಅನಿಮೇಶ್‌ ಪ್ರಧಾನ್‌ ಹಾಗೂ ಡೋಣೂರು ಅನನ್ಯಾ ರೆಡ್ಡಿ ಅವರು ಪಡೆದುಕೊಂಡಿದ್ದಾರೆ. ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿರುವ ಎಲ್ಲರಿಗೂ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ.

Advertisement

ಪ್ರಥಮ ರ್‍ಯಾಂಕ್‌ ಪಡೆದ ಲಕ್ನೋ ಮೂಲದ ಶ್ರೀವಾಸ್ತವ ಅವರು ಕಾನ್ಪುರ್‌ ಐಐಟಿಯಿಂದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿಟೆಕ್‌ ಪದವಿ ಪಡೆದಿದ್ದಾರೆ.

2022ರಲ್ಲಿ ಶ್ರೀವಾಸ್ತವ ಅವರು 216ನೇ ರ್‍ಯಾಂಕ್‌ ಗಳಿಸಿ, ಐಪಿಎಸ್‌ ಆಯ್ಕೆ ಮಾಡಿಕೊಂಡಿದ್ದರು. ಸದ್ಯ ಅವರು ಹೈದರಾಬಾದ್‌ನಲ್ಲಿ ಐಪಿಎಸ್‌ ತರಬೇತಿ ಪಡೆಯುತ್ತಿದ್ದಾರೆ. ಹೆಚ್ಚಿನ ಶ್ರೇಯಾಂಕ ಪಡೆಯುವುದಕ್ಕಾಗಿ ಅವರು ಮತ್ತೆ ಪರೀಕ್ಷೆ ಬರೆದಿದ್ದರು. ಟಾಪ್‌ 5ಅಭ್ಯರ್ಥಿಗಳ ಪೈಕಿ 3 ಪುರುಷ ಮತ್ತು 2 ಮಹಿಳೆಯರಿದ್ದಾರೆ. ತ್ರಿವೇಂದ್ರಮ್‌ನ ಪಿ.ಕೆ.ಸಿದ್ಧಾರ್ಥ ರಾಮಕುಮಾರ್‌ ಮತ್ತು ದಿಲ್ಲಿಯ ರೌಹಾನಿ ಅವರು ಕ್ರಮವಾಗಿ 4 ಮತ್ತು 5ನೇ ರ್‍ಯಾಂಕ್‌ ಗಳಿಸಿದ್ದಾರೆ. ಹಾಗೆಯೇ ಉತ್ತೀರ್ಣರಾದ 1016ರ ಪೈಕಿ 664 ಪುರಷರು ಮತ್ತು 352 ಮಹಿಳೆ ಯರು ಹಾಗೂ ಟಾಪ್‌ 25 ಪಟ್ಟಿಯಲ್ಲಿ 10 ಮಹಿಳೆ ಯರು ಮತ್ತು 15 ಪುರುಷರಿದ್ದಾರೆ. ಅಲ್ಲದೇ, 30 ವಿಶೇಷ ಚೇತನರೂ ಆಯ್ಕೆಯಾಗಿದ್ದಾರೆ.

ಕಳೆದ ವರ್ಷ ನಡೆದಿದ್ದ ಪರೀಕ್ಷೆ: ಕಳೆದ ವರ್ಷ ಮೇ28ರಂದು ಯುಪಿಎಸ್‌ಸಿ ಪ್ರಿಲೀಮ್ಸ್‌ ಪರೀಕ್ಷೆ ನಡೆದಿತ್ತು. ಒಟ್ಟು 5,92,141 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಬಳಿಕ ಸೆಪ್ಟಂಬರ್‌ ತಿಂಗಳಲ್ಲಿ ನಡೆದ ಮುಖ್ಯ ಪರೀಕ್ಷೆಗೆ 14,624 ಅಭ್ಯರ್ಥಿಗಳು ಹಾಜರಾಗಿದ್ದರು. ಸಂದರ್ಶನಕ್ಕೆ ತೇರ್ಗಡೆಯಾಗಿದ್ದ 2,855 ಅಭ್ಯರ್ಥಿಗಳಲ್ಲಿ 1,016 ಮಂದಿ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸಾಗಿದ್ದರು. ಈ ಪೈಕಿ ಸಾಮಾನ್ಯ ವರ್ಗ 347, ಇಡಬ್ಲ್ಯುಎಸ್‌ 115, ಒಬಿಸಿ 303, ಎಸ್‌ಸಿ 165 ಮತ್ತು ಎಸ್‌ಟಿ 86 ಅಭ್ಯರ್ಥಿಗಳಿದ್ದಾರೆ. ಕೇಂದ್ರದಲ್ಲಿ ಖಾಲಿ ಇರುವ ಒಟ್ಟು 1,143 ಹುದ್ದೆಗಳಿಗೆ ಈ ಅಭ್ಯರ್ಥಿಗಳನ್ನು ಯುಪಿಎಸ್‌ಸಿ ಶಿಫಾರಸು ಮಾಡಿದೆ.

ಉತ್ತೀರ್ಣರಾದವರಿಗೆ ಅಭಿನಂದನೆಗಳು. ಅವರ ಕೊಡುಗೆ ಶೀಘ್ರವೇ ದೇಶಕ್ಕೆ ಸಿಗುವಂತಾಗಲಿ.
– ನರೇಂದ್ರ ಮೋದಿ, ಪ್ರಧಾನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next