ಮಂಗಳೂರು: ನ್ಯಾಯಾಧೀಶರ ಹುದ್ದೆ ಬಹಳಷ್ಟು ಜವಾಬ್ದಾರಿಯುತವಾದುದು. ಕೇರಳದಂತಹ ಹೆಚ್ಚು ರಾಜಕೀಯ ಜಾಗೃತಿ ಮತ್ತು ಪ್ರಜ್ಞೆ ಇರುವ ರಾಜ್ಯದಲ್ಲಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವುದು ಬಹಳ ಕಷ್ಟದ ಕೆಲಸ. ಜ್ಞಾನ, ಅರ್ಪಣಾ ಮನೋಭಾವ, ಪರಿಶ್ರಮ ಮತ್ತು ದೇವರ ಆಶೀರ್ವಾದದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಹಾಗೂ ಮಂಗಳೂರಿನ ಎಸ್. ಡಿ.ಎಂ. ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ನ್ಯಾ| ಆ್ಯಂಟನಿ ಡೊಮಿನಿಕ್ ಹೇಳಿದರು.
ಅವರು ಶನಿವಾರ ಕೊಡಿಯಾಲ್‌ಬೈಲ್‌ನಲ್ಲಿರುವ ಮಂಗಳೂರು ಧರ್ಮ ಪ್ರಾಂತದ ಬಿಷಪ್ಸ್ ಹೌಸ್‌ನಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
“ನಾನು ಕಾನೂನು ಶಿಕ್ಷಣಕ್ಕಾಗಿ ಮಂಗಳೂರಿಗೆ ಬಂದದ್ದು, ಕಾನೂನು ಪದವಿ ಶಿಕ್ಷಣ ಪೂರ್ತಿಗೊಳಿಸಿದ್ದು, ವಕೀಲನಾದದ್ದು, ಬಳಿಕ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಾಧೀಶರ ಹುದ್ದೆಗೇರಿದ್ದು, ಎಲ್ಲವೂ ಆಕಸ್ಮಿಕ. ಅಲ್ಲದೆ ನಾನು ಕೇರಳದ ಕೆಥೋಲಿಕ್ ಸಮುದಾಯದ ಮೊದಲ ಮುಖ್ಯ ನ್ಯಾಯಮೂರ್ತಿ ‘ ಎಂದು ವಿವರಿಸಿದರು.
ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜಿನಲ್ಲಿ ಕಲಿತ ದಿನಗಳನ್ನು ಸ್ಮರಿಸಿದ ಅವರು ಈಗ ಮಂಗಳೂರು ಬಹಳಷ್ಟು ಬೆಳವಣಿಗೆ ಹೊಂದಿದೆ. ಮಂಗಳೂರು ಧರ್ಮಪ್ರಾಂತವು ಶಿಕ್ಷಣ ಮತ್ತು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಮಂಗಳೂರು ಧರ್ಮಪ್ರಾಂತದ ಬಿಷಪ್ ರೈ| ರೆ| ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ಅವರು ಸ್ವಾಗತಿಸಿ, ಧರ್ಮ ಪ್ರಾಂತದ ಪರವಾಗಿ ನ್ಯಾ| ಆ್ಯಂಟನಿ ಡೊಮಿನಿಕ್ ಅವರನ್ನು ಸಮ್ಮಾನಿಸಿದರು. ಧರ್ಮ ಪ್ರಾಂತದ ಪಾಲನಾ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಅಭಿನಂದಿಸಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ| ವಿಲಿಯಂ ಮಿನೇಜಸ್ ವಂದಿಸಿದರು. ಸಿ| ಜಾಸ್ಮಿನ್ ಕಾರ್ಯಕ್ರಮ ನಿರ್ವಹಿಸಿದರು. ಧರ್ಮಪ್ರಾಂತದ ವಿಕಾರ್ ಜನರಲ್ ಮೊ| ಡೆನಿಸ್ ಮೊರಾಸ್ ಪ್ರಭು, ಎಸ್‌ಡಿಎಂ ಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಪಿ.ಡಿ. ಸೆಬಾಸ್ಟಿಯನ್, ಧರ್ಮಪ್ರಾಂತದ ಇನ್ನೋರ್ವ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾರ್ಸೆಲ್ ಮೊಂತೇರೊ, ಮಾಧ್ಯಮ ಸಲಹೆಗಾರ ಇ. ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.