Advertisement

School ಅಡೂರು ಶಾಲೆಯಲ್ಲಿ ಕನ್ನಡ ಬಲ್ಲ ಶಿಕ್ಷಕಿ ನೇಮಿಸಲು ಕೇರಳ ಹೈಕೋರ್ಟ್‌ ಆದೇಶ

01:05 AM Aug 26, 2023 | Team Udayavani |

ಕಾಸರಗೋಡು: ಅಡೂರು ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಕನ್ನಡ ವಿಭಾಗಕ್ಕೆ ಮಲಯಾಳ ಶಿಕ್ಷಕಿ ನೇಮಕದ ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರು ನಡೆಸಿದ ಹೋರಾಟದ ಫಲವಾಗಿ ಕನ್ನಡ ಬಲ್ಲ ಶಿಕ್ಷಕಿಯನ್ನು ನೇಮಿಸಲು ಕೇರಳ ಹೈಕೋರ್ಟ್‌ ಆದೇಶ ನೀಡಿದೆ. ಈ ಮೂಲಕ ಹೋರಾಟಕ್ಕೆ ಮಹತ್ವದ ಜಯ ಲಭಿಸಿದೆ.

Advertisement

ಮಲಯಾಳಿ ಭಾಷೆಯ ಶಿಕ್ಷಕಿಗೆ ಕನ್ನಡದಲ್ಲಿ ವ್ಯವಹರಿಸಲು ತಿಳಿಯದು ಎಂಬುದನ್ನು ಮನಗಂಡಿರುವ ನ್ಯಾಯಾಲಯ, ಕೂಡಲೇ ಆ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾಯಿಸಿ ತತ್‌ಕ್ಷಣವೇ ಅವರ ಸ್ಥಾನಕ್ಕೆ ಕನ್ನಡ ಬಲ್ಲ ಶಿಕ್ಷಕರನ್ನು ನೇಮಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ. ನಿರಂತರವಾಗಿ ಕೇರಳ ಸರಕಾರ, ಶಿಕ್ಷಣ ಇಲಾಖೆ ಹಾಗೂ ಕೇರಳ ಲೋಕಸೇವಾ ಆಯೋಗ ಕನ್ನಡ ವಿರೋಧಿ ನೀತಿಯನ್ನು ಅನುಸರಿಸಿಕೊಂಡು ಬರುತ್ತಿದ್ದು, ಈ ತೀರ್ಪು ಚಾಟಿ ಬೀಸಿದಂತಾಗಿದೆ.

ಅಡೂರು ಶಾಲೆಗೆ ಮಲಯಾಳ ಶಿಕ್ಷಕಿಯನ್ನು ನೇಮಿಸಿದ ಪರಿಣಾಮವಾಗಿ ಸುಮಾರು ಎರಡು ತಿಂಗಳಿನಿಂದ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಪಾಠವೇ ಇಲ್ಲ ಎಂಬಂತಾಗಿತ್ತು. ಈ ನೇಮಕವನ್ನು ವಿದ್ಯಾರ್ಥಿಗಳು, ಪೋಷಕರು ಪ್ರತಿಭಟಿಸಿದ್ದರಲ್ಲದೇ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕೇರಳ ಹೈಕೋರ್ಟ್‌ ಅಡೂರು ಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕಿ ಪಾಠ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ. ಈ ಸ್ಥಾನಕ್ಕೆ ಕನ್ನಡ ಬಲ್ಲ ಶಿಕ್ಷಕರನ್ನು ನೇಮಿಸಬೇಕೆಂದು ಆದೇಶದಲ್ಲಿ ತಿಳಿಸಿದೆ. ಈ ತೀರ್ಪನ್ನು ಮಲಯಾಳ ಭಾಷಿಕ ಶಿಕ್ಷಕರು ನೇಮಕಗೊಂಡಿರುವ ಎಲ್ಲ ಕನ್ನಡ ಮಾಧ್ಯಮ ಶಾಲೆಗಳಿಗೆ ಅನ್ವಯಿಸುವಂತೆ ವಾದ ಮಂಡಿಸಿದೆ. ಈ ಬಗ್ಗೆ ತೀರ್ಪು ಬರಬೇಕಷ್ಟೆ ಎಂದು ಕೋರ್ಟ್‌ ಮೆಟ್ಟಿಲೇರಿದ್ದ ಅಡೂರು ಶಾಲಾ ಪೋಷಕರು ತಿಳಿಸಿದ್ದಾರೆ.

ಆದೇಶಕ್ಕೆ ಸಚಿವ ತಂಗಡಗಿ ಸಂತಸ
ಬೆಂಗಳೂರು : ಕಾಸರಗೋಡಿನ ಅಡೂರು ಕನ್ನಡ ಶಾಲೆಗೆ ಕನ್ನಡ ಭಾಷೆ ತಿಳಿದಿರುವ ಶಿಕ್ಷಕರನ್ನೇ ನೇಮಿಸುವಂತೆ ಕೇರಳ ಹೈಕೋರ್ಟ್‌ ಅಲ್ಲಿನ ಸರಕಾರಕ್ಕೆ ಆದೇಶ ನೀಡಿರುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಈ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲಿನ ಜನಸಾಮಾನ್ಯರ ನಂಬಿಕೆ ಮತ್ತಷ್ಟು ಬಲಗೊಂಡಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next