ಕೊಚ್ಚಿ: ವಿನಾ ಕಾರಣ ಕಳವಿನ ಆರೋಪ ಹೊರಿಸಿದ್ದಕ್ಕಾಗಿ ಎಂಟು ವರ್ಷದ ಬಾಲಕಿಗೆ 1.50 ಲಕ್ಷ ರೂ. ಪರಿಹಾರ ನೀಡುವಂತೆ ಕೇರಳ ಹೈಕೋರ್ಟ್ ರಾಜ್ಯ ಮಹಿಳಾ ಪೊಲೀಸ್ ವಿಭಾಗಕ್ಕೆ ಆದೇಶ ನೀಡಿದೆ.ಜತೆಗೆ ರಾಜ್ಯ ಸರ್ಕಾರ ಕಾನೂನು ವೆಚ್ಚದ ಪರಿಹಾರ ಎಂದು 25 ಸಾವಿರ ರೂ.ಗಳನ್ನು ನೀಡಬೇಕು ಎಂದು ನ್ಯಾ.ದೇವನ್ ರಾಮಚಂದ್ರನ್ ನೇತೃತ್ವದ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ. ಜತೆಗೆ ಮಹಿಳಾ ಪೊಲೀಸ್ ಅಧಿಕಾರಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ.
ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆ ಆ.27ರಂದು ತುಂಬ ಎಂಬಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ ಆಗಮಿಸಿದ್ದ ದೊಡ್ಡ ಕಂಟೈನರ್ ಅನ್ನು ವೀಕ್ಷಿಸಲು ಹೋಗಿದ್ದರು. ಆ ಸ್ಥಳದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ರಂಜಿತಾ ಎಂಬ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ್ದ ತಂದೆ ಮತ್ತು ಮಗಳ ಮೇಲೆ ಮೊಬೈಲ್ ಕಳವಿನ ಆರೋಪ ಮಾಡಿ, ಅವರಿಬ್ಬರನ್ನು ನಿಂದಿಸಿದ್ದರು ಮತ್ತು ಅದಕ್ಕೆ ಮತ್ತೊಬ್ಬ ಅಧಿಕಾರಿಯೂ ಸಾಥ್ ನೀಡಿದ್ದರೆಂದು ಆರೋಪಿಸಲಾಗಿತ್ತು. ಆಘಾತಕ್ಕೆ ಒಳಗಾಗಿದ್ದ ಬಾಲಕಿಗೆ ವೈದ್ಯಕೀಯ ಚಿಕಿತ್ಸೆಯನ್ನೂ ನೀಡಲಾಗಿತ್ತು. ಹೀಗಾಗಿ, ತಂದೆ ಪೊಲೀಸರ ವಿರುದ್ಧ ದಾವೆ ಹೂಡಿ, 50 ಲಕ್ಷ ರೂ. ಪರಿಹಾರ ಕೋರಿದ್ದರು.
ಇದನ್ನೂ ಓದಿ:ಪವಿತ್ರ ಗೋವು ನಮ್ಮ ತಾಯಿ, ಹಾಸ್ಯದ ವಸ್ತುವಲ್ಲ : ಪ್ರಧಾನಿ ಮೋದಿ ಕಿಡಿ
ಈ ಅಂಶವನ್ನು ಗಂಭೀರವಾಗಿ ತೆಗೆದುಕೊಂಡ ಹೈಕೋರ್ಟ್ “ನಮ್ಮ ಹೆಣ್ಣು ಮಕ್ಕಳನ್ನು ಕೋಪ, ಆತಂಕದ ವಾತಾವರಣದಲ್ಲಿ ಬೆಳೆಯಲು ಅವಕಾಶ ಕೊಡಬಾರದು. ಸಂವಿಧಾನದ 21ನೇ ವಿಧಿಯಲ್ಲಿ ಉಲ್ಲೇಖೀಸಿದಂತೆ ಬಾಲಕಿಯ ಮೂಲಭೂತ ಹಕ್ಕುಗಳು ಈ ಪ್ರಕರಣದಲ್ಲಿ ಉಲ್ಲಂಘನೆಯಾಗಿದೆ. ಮಹಿಳಾ ಪೊಲೀಸ್ ಅಧಿಕಾರಿ ನಡೆದುಕೊಂಡ ರೀತಿಯೂ ಸರಿಯಾಗಿ ಇರಲಿಲ್ಲ. ರಾಜ್ಯ ಸರ್ಕಾರ ಬಾಲಕಿಗೆ ಪರಿಹಾರ ನೀಡಬೇಕು’ ಎಂದು ಆದೇಶಿಸಿದೆ.