ಕಣ್ಣೂರು: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸೋಮವಾರ ಮತ್ತೆ ತಮ್ಮ ವಾಹನದಿಂದ ಕೆಳಗಿಳಿದು ಈ ಜಿಲ್ಲೆಯ ಮಟ್ಟನ್ನೂರು ಪಟ್ಟಣದಲ್ಲಿ ತಮ್ಮ ಬೆಂಗಾವಲು ಪಡೆಗೆ ಕಪ್ಪು ಬಾವುಟ ಪ್ರದರ್ಶಿಸಿದ ಭಾರತೀಯ ವಿದ್ಯಾರ್ಥಿ ಫೆಡರೇಶನ್ (SFI) ಕಾರ್ಯಕರ್ತರನ್ನು ಎದುರಿಸಿದ್ದಾರೆ.
ನೆರೆಯ ವಯನಾಡ್ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ದಾಳಿಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಆರಿಫ್ ಖಾನ್ ಇಲ್ಲಿನ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ರಾಜ್ಯಪಾಲರ ಬೆಂಗಾವಲು ಪಡೆ ಹಾದು ಹೋಗುತ್ತಿದ್ದಾಗ ಎಸ್‌ಎಫ್‌ಐ ಕಾರ್ಯಕರ್ತರು ಅವರ ವಾಹನದ ಮುಂದೆ ಜಿಗಿಯಲು ಯತ್ನಿಸಿ ಕಪ್ಪು ಬಾವುಟ ಪ್ರದರ್ಶಿಸಿದರು.ಕಾರ್ಯಕರ್ತರ ವರ್ತನೆಗೆ ಕೋಪಗೊಂಡ ರಾಜ್ಯ ಪಾಲರು , ತನ್ನ ಕಾರನ್ನು ನಿಲ್ಲಿಸಲು ಸೂಚಿಸಿ ಕೆಳಗಿಳಿದು ಪ್ರತಿಭಟನಾಕಾರರ ಎದುರು ಬಂದು “ಬನ್ನಿ… ಬನ್ನಿ…” ಎಂದು ಕರೆದರು.
ಪೊಲೀಸರು ಮತ್ತುಭದ್ರತಾ ಸಿಬಂದಿ ರಾಜ್ಯಪಾಲರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಗವರ್ನರ್ ಖಾನ್ ಮಣಿಯಲು ಸಿದ್ಧರಿರಲ್ಲ, ಇದು ಉದ್ವಿಗ್ನ ಕ್ಷಣಗಳಿಗೆ ಕಾರಣವಾಯಿತು. ಕೊನೆಗೂ ರಾಜ್ಯಪಾಲರನ್ನು ಕಾರಿನೊಳಗೆ ಹತ್ತಿಸಿಕೊಳ್ಳುವಲ್ಲಿ ಭದ್ರತಾ ಸಿಬಂದಿ ಯಶಸ್ವಿಯಾದರು.
ತನ್ನ ವಿರುದ್ಧ ಪ್ರತಿಭಟಿಸಿದ ಎಸ್‌ಎಫ್‌ಐ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿ ಕೊಲ್ಲಂನ ನಿಲಮೇಲ್‌ನಲ್ಲಿ ರಾಜ್ಯಪಾಲರು ರಸ್ತೆ ಬದಿ ಪ್ರತಿಭಟನೆ ನಡೆಸಿದ ವಾರಗಳ ನಂತರ ಮಟ್ಟನ್ನೂರ್ ಈ ಘಟನೆ ನಡೆದಿದೆ.
ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳನ್ನು ಕೇಸರಿಮಯಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರ ವಿರುದ್ಧ ಎಸ್‌ಎಫ್‌ಐ ಕಳೆದ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ.