ತಿರುವನಂತಪುರಂ: ಸರ್ಕಾರದ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ನಡೆಯುತ್ತಿದ್ದು, ಅಘೋರಿಗಳ ಮೂಲಕ ಈ ಕಾರ್ಯ ಕೈಗೊಳ್ಳಲಾಗಿದೆ. ಇದಕ್ಕಾಗಿ ಪಂಚ ಬಲಿ ನೀಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆರೋಪಕ್ಕೆ ಶನಿವಾರ (ಜೂನ್ 01) ಕೇರಳ ಸರ್ಕಾರ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಯಾವುದೇ ಪ್ರಾಣಿ ಬಲಿಯ ಯಾಗ ನಡೆದಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ:T20 World Cup ಆರಂಭದ ದಿನದಂದು ಉದ್ಘಾಟನಾ ಸಮಾರಂಭವಿಲ್ಲ! ಇಲ್ಲಿದೆ ಎಲ್ಲಾ ವಿವರ
ಕೇರಳ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ಸ್ಪಷ್ಟನೆ ನೀಡಿ, ಕರ್ನಾಟಕದ ಡಿಸಿಎಂ ಶಿವಕುಮಾರ್ ಅವರು ಮಾಡಿರುವ ಗಂಭೀರ ಆರೋಪದ ಬಗ್ಗೆ ನಾವು ತನಿಖೆ ನಡೆಸಿದ್ದೇವು. ಪ್ರಾಥಮಿಕ ವರದಿ ಪ್ರಕಾರ, ರಾಜರಾಜೇಶ್ವರ ದೇವಾಲಯದ ಸಮೀಪವಾಗಲಿ ಅಥವಾ ಸುತ್ತಮುತ್ತ ಪ್ರಾಣಿಬಲಿ ನೀಡಿ ಯಾಗ ನಡೆಸಿರುವ ಘಟನೆ ನಡೆದಿಲ್ಲ. ಇದನ್ನು ದೇವಸ್ವಂ ಮಂಡಳಿ ಕೂಡಾ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಯಾಕೆ ಇಂತಹ ಗಂಭೀರ ಆರೋಪ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ರಾಧಾಕೃಷ್ಣನ್ ಹೇಳಿದರು. ರಾಜ್ಯದ ಬೇರೆ ಕಡೆ ಇಂತಹ ಯಾಗ ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. 1968ರಿಂದ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ.
ಕಣ್ಣೂರಿನಲ್ಲಿ ಶತ್ರು ಭೈರವಿ ಯಾಗ ಮಾಡಿ, ಅಲ್ಲಿ ಪಂಚ ಬಲಿ ನೀಡಲಾಗಿದೆ ಎಂಬ ಡಿಕೆಶಿ ಹೇಳಿಕೆ ನೂರಕ್ಕೆ ನೂರರಷ್ಟು ಸುಳ್ಳು. ದೇವಾಲಯದ ಸುತ್ತಮುತ್ತ, ಸಮೀಪದ ಸ್ಥಳದಲ್ಲಿ ಯಾಗ ನಡೆಸಿರುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಸರ್ಕಾರಕ್ಕೆ ವರದಿ ನೀಡಿರುವುದಾಗಿ ಸಚಿವ ರಾಧಾಕೃಷ್ಣನ್ ತಿಳಿಸಿದ್ದಾರೆ.