ತಿರುವನಂತಪುರಂ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಸಿಪಿಎಂನ ಹಲವು ಮಾಜಿ ಸಚಿವರು ನನ್ನಿಂದ “ಲೈಂಗಿಕ ಸಹಕಾರ’ ಕೋರಿದ್ದರು ಎಂದು ಸ್ವಪ್ನಾ ಸೋಮವಾರ ಆರೋಪಿಸಿದ್ದಾರೆ. ಇದು ಕೇರಳದಲ್ಲಿ ಹೊಸ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.
ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಕೇರಳದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಮೂವರು ಪ್ರಮುಖ ನಾಯಕರ ವಿರುದ್ಧವೇ ಸ್ವಪ್ನಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಜಿ ಸಚಿವ ಕಡಕಂಪಳ್ಳಿ ಸುರೇಂದ್ರನ್, ಕೇರಳ ಅಸೆಂಬ್ಲಿಯ ಮಾಜಿ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಮತ್ತು ಮಾಜಿ ಹಣಕಾಸು ಸಚಿವ ಡಾ.ಥಾಮಸ್ ಐಸಾಕ್ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದೂ ಸ್ವಪ್ನಾ ಆರೋಪಿಸಿದ್ದಾರೆ.
ನಾನು ತಿರುವನಂತಪುರಂನ ಯುಎಇ ಕಾನ್ಸುಲ್ ಜನರಲ್‌ನ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಈ ಮೂವರು ನಾಯಕರು ಪಿಣರಾಯಿ ವಿಜಯನ್ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ಸಚಿವರಾಗಿದ್ದರು. ಆಗ ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಸುರೇಂದ್ರನ್ ಮತ್ತು ಶ್ರೀರಾಮಕೃಷ್ಣನ್ ನನ್ನ ಮೇಲೆ ಒತ್ತಡ ಹೇರಿದ್ದರು. ಫೋನ್‌ನಲ್ಲಿ ಮಾತನಾಡುವಾಗ ಮತ್ತು ಮುಖಾಮುಖಿಯಾದಾಗಲೂ ನನ್ನೊಂದಿಗೆ ಆಕ್ಷೇಪಾರ್ಹವಾಗಿ ವರ್ತಿಸಿದ್ದರು. ಇನ್ನು, ಥಾಮಸ್ ಅವರು ಪರೋಕ್ಷವಾಗಿ ನನ್ನಿಂದ ಲೈಂಗಿಕ ಸಹಕಾರ ಕೋರಿದ್ದರು. ಇವರೆಲ್ಲರೂ ನೈತಿಕತೆ ಇಲ್ಲದ ವ್ಯಕ್ತಿಗಳು ಎಂದು ಸ್ವಪ್ನಾ ಕಿಡಿಕಾರಿದ್ದಾರೆ.
ಸ್ವಪ್ನಾರ ಈ ಆರೋಪವನ್ನು ಆಡಳಿತಾರೂಢ ಎಲ್‌ಡಿಎಫ್ ಸರ್ಕಾರ ತಿರಸ್ಕರಿಸಿದೆ. “ಎಡಪಕ್ಷವು ಯಾವತ್ತೂ ತನ್ನ ಸದಸ್ಯರನ್ನು ರಕ್ಷಿಸಲು ಯತ್ನಿಸುತ್ತದೆ’ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರೋಪಿಸಿದೆ.