ಕೊಚ್ಚಿ/ತಿರುವನಂತಪುರ: ಚಿನ್ನ ಕಳ್ಳ ಸಾಗಣೆ ಮಾಡುವ ಮಾಡುವ ಮೂಲಕ ದೇಶದ ಅರ್ಥ ವ್ಯವಸ್ಥೆ ಕುಸಿವಂತೆ ಮಾಡುವ ಉದ್ದೇಶವೂ ಸ್ವಪ್ನ ಸುರೇಶ್ ಗ್ಯಾಂಗ್‌ಗೆ ಇತ್ತು. ಅದರಿಂದ ಬಂದ ಹಣವನ್ನು ಉಗ್ರವಾದಿಗಳಿಗೆ ವಿತರಿಸುವ ಬಗ್ಗೆ ಯೋಚಿಸಲಾಗಿತ್ತು ಎಂದು ಎನ್‌ಐಎ ಹೇಳಿದೆ.
ಕೊಚ್ಚಿಯಲ್ಲಿರುವ ಎನ್‌ಐಎ ವಿಶೇಷ ಕೋರ್ಟ್‌ಗೆ ಸಲ್ಲಿಸಲಾಗಿರುವ ರಿಮ್ಯಾಂಡ್ ರಿಪೋರ್ಟ್‌ನಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಕೇರಳದ ರಾಜಕೀಯ ವಲಯದಲ್ಲಿ ವಿವಾದ ಸೃಷ್ಟಿಸಿರುವ ಪ್ರಕರಣದಲ್ಲಿ ಸ್ವಪ್ನಾ ಹಾಗೂ ಸಂದೀಪ್ ನಾಯರ್ ಕಳ್ಳಸಾಗಣೆಯಲ್ಲಿ ತಮ್ಮ ಪಾತ್ರ ಇರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣದ ಸೂತ್ರಧಾರಿ ರಮೀಜ್. ಆತನ ಆಣತಿಯಂತೆ ಸ್ವಪ್ನಾ ಮುಂತಾದವರು ನಡೆದುಕೊಳ್ಳುತ್ತಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚೆಚ್ಚು ಚಿನ್ನದ ಕಳ್ಳಸಾಗಣೆ ಮಾಡಬಹುದೆಂಬ ಲೆಕ್ಕಾಚಾರ ಹಾಕಿದ್ದ ರಮೀಜ್ ಆ ನಿಟ್ಟಿನಲ್ಲಿ ಕಾರ್ಯ ನಿರತನಾಗಿದ್ದ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ
ಕಸ್ಟಡಿ ವಿಸ್ತರಣೆ: ಎನ್‌ಐಎ ಬಂಧನದಲ್ಲಿರುವ ಸ್ವಪ್ನ ಸುರೇಶ್ ಹಾಗೂ ಸಂದೀಪ್ ನಾಯರ್ ಬಂಧನಾವಧಿಯನ್ನು ಜು. 24ರವರೆಗೆ ವಿಸ್ತರಿಸಲಾಗಿದೆ. ಕೊಚ್ಚಿಯಲ್ಲಿರುವ ಎನ್‌ಐಎ ವಿಶೇಷ ಕೋರ್ಟ್ ಈ ಆದೇಶ ನೀಡಿದೆ. ಈ ನಡುವೆ, ಸ್ವಪ್ನ ಸುರೇಶ್ ಅವರು ತಮಗೆ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಕೂಡ, ಜು. 24ರಂದು ನಡೆಯುವ ನಿರೀಕ್ಷೆಯಿದೆ.
ಸಚಿವ ಜಲೀಲ್ ನಂಟಿನ ಬಗ್ಗೆ ತನಿಖೆ?: ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ಹಾಗೂ ಯುಎಇ ದೂತಾವಾಸ ಕಚೇರಿಯ ಸಿಬಂದಿಯ ನಡುವೆ ಇದ್ದ ಸಂಬಂಧದ ಬಗ್ಗೆ ವಿದೇಶಾಂಗ ಇಲಾಖೆ ಮಾಹಿತಿ ಕಲೆಹಾಕಿದ್ದು ಆ ಬಗ್ಗೆ ಪರಿಶೀಲನೆ ನಡೆಸಲಾರಂಭಿಸಿದೆ ಎಂದು “ಮಾತೃ ಭೂಮಿ ಇಂಗ್ಲಿಷ್’ ವರದಿ ಮಾಡಿದೆ. ರಂಜಾನ್ ವೇಳೆ, ಯುಎಇಯಿಂದ ತರಿಸಲಾಗಿದ್ದ ಕಿಟ್‌ಗಳನ್ನು ವಿತರಣೆ ಮಾಡಿರುವ ವಿವಾದದ ಬಗ್ಗೆಯೂ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ.
ಮತ್ತೂಂದೆಡೆ, ಯುಎಇ ದೂತಾವಾಸ ಕಚೇರಿಯ ಸಿಬ್ಬಂದಿಯ ಜೊತೆಗೆ ಜಲೀಲ್ ಅವರು ನಂಟು ಹೊಂದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಿಯಮಗಳ ಪ್ರಕಾರ, ಯಾವುದೇ ವಿದೇಶಿ ದೂತಾವಾಸಗಳ ಸಿಬಂದಿಯ ಜೊತೆಗೆ ರಾಜ್ಯ ಸರಕಾರಗಳ ಸಚಿವರು, ರಾಜ್ಯಗಳ ಶಾಸಕರು ನಂಟು ಹೊಂದಿರುವಂತಿಲ್ಲ. ಆದರೆ, ಇಲ್ಲಿಯೂ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.
ಅಧಿಕಾರಿಗಳು ಶಾಮೀಲು?
ಕೇರಳ ಚಿನ್ನದ ಕಳ್ಳಸಾಗಣೆಯಲ್ಲಿ ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳ ತನಿಖೆ ಮತ್ತಷ್ಟು ಆಳವಾಗಿ ಸಾಗುತ್ತಿದ್ದಂತೆ ಹಲವಾರು ಸ್ಫೋಟಕ ವಿಚಾರಗಳು ಹೊರ ಬರಲಾರಂಭಿಸಿವೆ. ಈ ಪ್ರಕರಣದ ಆರೋಪಿಯಾಗಿರುವ ಸ್ವಪ್ನಾ ಸುರೇಶ್, ಕೇರಳ ಪೊಲೀಸ್‌ನ ಇಬ್ಬರು ಉನ್ನತ ಅಧಿಕಾರಿಗಳ ಜೊತೆಗೆ ನಂಟು ಹೊಂದಿರುವ ಬಗ್ಗೆ ಕೆಲವಾರು ಸುಳಿವು ಸಿಕ್ಕಿದ್ದು, ಅವರ ಸಹಾಯದಿಂದಲೇ ಆಕೆ ಈವರೆಗೆ ಕೆಲವಾರು ಕಳ್ಳಸಾಗಣೆಗಳನ್ನು ಸುಲಭವಾಗಿ ನಡೆಸಿಕೊಂಡು ಹೋಗಿರಬಹುದು ಎಂದು ಅನುಮಾನಿಸಲಾಗಿದೆ.