ತಿರುವನಂತಪುರಂ: ತರಗತಿ ಕೋಣೆಯೊಳಗೆ ವಿದ್ಯಾರ್ಥಿನಿಯೊಬ್ಬಳಿಗೆ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿದ್ದು, ಈ ವಿಷಯ ತಿಳಿದ ನಂತರವೂ ಶಿಕ್ಷಕಿ ಪಾಠವನ್ನು ಮುಂದುರಿಸಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿರುವ ಘಟನೆ ಕೇರಳದ ವಯನಾಡ್ ಜಿಲ್ಲೆಯಲ್ಲಿ ನಡೆದಿದೆ.
ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ಥೇರಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಶೇಹಾಲಾ(10ವರ್ಷ)ಗೆ ತರಗತಿಯೊಳಗೆ ಹಾವು ಕಚ್ಚಿತ್ತು. ಆದರೆ ಈ ಘಟನೆ ನಡೆದು ಒಂದು ಗಂಟೆ ನಂರ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಿರುವುದಾಗಿ ವಿದ್ಯಾರ್ಥಿಗಳು ದೂರಿದ್ದಾರೆ.
ವಿದ್ಯಾರ್ಥಿನಿಗೆ ಹಾವು ಕಚ್ಚಿದೆ ಎಂದು ತಿಳಿದ ನಂತರವೂ ಶಿಕ್ಷಕಿ ಪಾಠವನ್ನು ಮುಂದುವರಿಸಿದ್ದು, ಆಕೆಯ ತಂದೆ ಬಂದು ಆಸ್ಪತ್ರೆಗೆ ದಾಖಲಿಸುತ್ತಾರೆ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ಅಷ್ಟರೊಳಗೆ ವಿದ್ಯಾರ್ಥಿನಿಯ ಕಾಲು ನೀಲಿ ಬಣ್ಣಕ್ಕೆ ತಿರುಗಿತ್ತು. ಈ ಘಟನೆ ಬುಧವಾರ ಶಾಲೆಯಲ್ಲಿ ನಡೆದಿತ್ತು. ಘಟನೆ ಬಗ್ಗೆ ಟೆಲಿವಿಷನ್ ಚಾನೆಲ್ ಗಳು ತರಗತಿ ಹಾಗೂ ವಿದ್ಯಾರ್ಥಿನಿ ಕುಳಿತುಕೊಂಡಿದ್ದ ಸ್ಥಳದ ಸಮೀಪದಲ್ಲೇ ಇದ್ದ ರಂಧ್ರದ ದೃಶ್ಯವನ್ನು ಪ್ರಸಾರ ಮಾಡಿದ್ದವು.
ಶಿಕ್ಷಕಿಯನ್ನು ಅಮಾನತು ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ವಿದ್ಯಾರ್ಥಿನಿಗೆ ತಕ್ಷಣವೇ ತುರ್ತು ಚಿಕಿತ್ಸೆ ನೀಡಲು ವಿಳಂಬ ಮಾಡಿರುವ ಆರೋಪದ ಬಗ್ಗೆ ವರದಿ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಿಕ್ಷಣ ಸಚಿವ ರವೀಂದ್ರನಾಥ್ ಅವರು ಸೂಚಿಸಿದ್ದಾರೆ.
ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಸ್ಟಾಫ್ ರೂಂಗೆ ನುಗ್ಗಿ ಶಿಕ್ಷಕಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಆದರೆ ಪೊಲೀಸರು ಮಧ್ಯಪ್ರವೇಶಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿರುವುದಾಗಿ ವರದಿ ತಿಳಿಸಿದೆ.