Advertisement

ಮಾನವೀಯತೆಯ ವಿದೇಶಿ ನೆರವು ಪರಿಗಣಿಸಬಹುದು

07:45 AM Aug 24, 2018 | Team Udayavani |

ಹೊಸದಿಲ್ಲಿ,/ಕೊಚ್ಚಿ: ಪ್ರವಾಹದಿಂದ ನಲುಗಿರುವ ಕೇರಳಕ್ಕೆ ವಿದೇಶಿ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿತ್ತು. ಆದರೆ 2016ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ‘ಪ್ರಾಕೃತಿಕ ವಿಪತ್ತು ನಿರ್ವಹಣೆ ಹೇಗೆ?’ ಎಂಬ ಕೈಪಿಡಿಯಲ್ಲಿ ವಿದೇಶಿ ರಾಷ್ಟ್ರಗಳಿಂದ ದೇಣಿಗೆ ಸ್ವೀಕರಿಸಬಹುದು ಎಂಬ ವಿಚಾರ ಉಲ್ಲೇಖವಾಗಿರುವುದು ಗುರುವಾರ ಬೆಳಕಿಗೆ ಬಂದಿದೆ.

Advertisement

ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆ ದಾಖಲೆಯಲ್ಲಿ ಉಲ್ಲೇಖೀಸಿರುವ ಪ್ರಕಾರ ‘ದುರಂತಕ್ಕೆ ಸ್ಪಂದಿಸಿ ಇನ್ನೊಂದು ದೇಶದ ಸರಕಾರವು ಮಾನವೀಯತೆಯ ದೃಷ್ಟಿಯಿಂದ ನೀಡುವ ನೆರವು ಸ್ವೀಕರಿಸಲು ಕೇಂದ್ರ ಪರಿಶೀಲಿಸಬಹುದಾಗಿದೆ’ ಎಂದು ಪ್ರಸ್ತಾಪಿಸಲಾಗಿದೆ. ಕೇಂದ್ರ ಗೃಹ ಇಲಾಖೆ ವಕ್ತಾರ ‘ಸದ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದಷ್ಟೇ ಹೇಳಿದ್ದಾರೆ. 2016ರ ಈ ಕೈಪಿಡಿಯಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವರ ಸಂದೇಶವೂ ಇದೆ. 2004ರಲ್ಲಿಯೇ ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರ ವಿದೇಶಿ ದೇಣಿಗೆ ಸ್ವೀಕರಿಸಬಾರದು ಎಂಬ ನಿಯಮ ಜಾರಿ ಮಾಡಿತ್ತು ಎಂದು ಹೇಳಿರುವ ಕೇಂದ್ರ ಸರಕಾರ ಯುಎಇ ಮತ್ತು ಥಾಯ್ಲೆಂಡ್‌ ನೀಡಲು ಮುಂದಾಗಿದ್ದ ನೆರವು ಸ್ವೀಕರಿಸಲು ಒಪ್ಪಿರಲಿಲ್ಲ.

ಇದೇ ವೇಳೆ ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫೋನ್ಸ್‌ ಕನ್ನಂಥಾನಮ್‌ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿ ’50 ವರ್ಷಗಳಿಂದ ವಿದೇಶಗಳಲ್ಲಿರುವ ಕೇರಳಿಗರು ಕೋಟ್ಯಂತರ ರೂ. ವಿದೇಶಿ ವಿನಿಮಯ ಮೊತ್ತ ನೀಡುವಲ್ಲಿ ನೆರವಾಗಿದ್ದಾರೆ. ಕಳೆದ ವರ್ಷವೇ ಅವರು 70 ಸಾವಿರ ಕೋಟಿ ರೂ. ವಿದೇಶಿ ವಿನಿಮಯ ಮೊತ್ತ ಸಂಗ್ರಹಿಸಲು ನೆರವಾಗಿದ್ದರು. ಹೀಗಾಗಿ, ಸರಕಾರದ ಹಿರಿಯ ಸಚಿವರು 14 ವರ್ಷದ ಹಿಂದಿನ ನಿಯಮವನ್ನು ಒಂದು ಬಾರಿ ಸಡಿಲಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಗಮನಾರ್ಹ ಅಂಶವೆಂದರೆ, ಗುರುವಾರ ಬೆಳಗ್ಗೆ ಅಲ್ಫೋನ್ಸ್‌ ಕನ್ನಂಥಾನಮ್‌ ಅವರು 700 ಕೋಟಿ ರೂ. ನೀಡುವ ಯುಎಇ ನೀಡುವ ನೆರವು ತಿರಸ್ಕರಿಸಿದ್ದನ್ನು ಸಮರ್ಥಿಸಿಕೊಂಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿದೇಶಿ ರಾಷ್ಟ್ರಗಳಿಂದ ನೆರವು ಸ್ವೀಕರಿಸುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದರು. ಇನ್ನೊಂದೆಡೆ, ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಪ್ರಧಾನಿಗೆ ಪತ್ರ ಬರೆದು ನಿಯಮ ಸಡಿಲಿಸುವಂತೆ ಮನವಿ ಮಾಡಿದ್ದಾರೆ.

2,600 ಕೋಟಿ ಕೊಡಿ: ಯುಎಇ ನೀಡಲಿರುವ 700 ಕೋಟಿ ರೂ. ನೆರವು ಬೇಡ ಎಂದಾದರೆ ಕೇಂದ್ರ ಸರಕಾರ ಕೇರಳಕ್ಕೆ ಕೂಡಲೇ 2,600 ಕೋಟಿ ರೂ. ಸಹಾಯ ನೀಡಬೇಕು ಎಂದು ಸಿಪಿಐ ಒತ್ತಾಯಿಸಿದೆ.

Advertisement

ಚುರುಕುಗೊಂಡ ಸ್ವತ್ಛತಾ ಕಾರ್ಯ: ಕೇರಳದ ಹೆಚ್ಚಿನ ಪ್ರದೇಶಗಳಲ್ಲಿ ನೆರೆ ನೀರು ತಗ್ಗಿರುವುದರಿಂದ ಹೆಚ್ಚಿನ ಜಿಲ್ಲೆಗಳಲ್ಲಿ ಜನರು ಅವರವರ ಮನೆಗಳಿಗೆ ತೆರಳಲು ಆರಂಭಿಸಿದ್ದಾರೆ. ಜತೆಗೆ ಮನೆಯ ಸ್ವತ್ಛತಾ ಕಾರ್ಯಗಳನ್ನೂ ಕೈಗೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನೆರವು ನೀಡಲು ನಿಯಂತ್ರಣಾ ಕೊಠಡಿಯನ್ನೂ ಸ್ಥಾಪಿಸಲಾಗಿದೆ. ಇಲೆಕ್ಟ್ರೀಷಿಯನ್‌, ಪ್ಲಂಬರ್‌ ಸೇರಿದಂತೆ ಹಲವು ಮಂದಿಯನ್ನು ನಿಯೋಜಿಸಲಾಗಿದೆ. ಹರಿತ ಕೇರಳ ಎಂಬ ಸಂಘಟನೆ 50 ಸಾವಿರ ಸ್ವಯಂ ಸೇವಕರು ಕೆಲಸಗಾರರಿಗೆ ನೆರವಾಗಲಿದ್ದಾರೆ. ಇದೇ ವೇಳೆ, ಸಿಎಂ ಪಿಣರಾಯಿ ಗುರುವಾರ 3 ಜಿಲ್ಲೆಗಳ ಸಂತ್ರಸ್ತ ಶಿಬಿರಗಳಿಗೆ ಭೇಟಿ ನೀಡಿ, ಸಂತ್ರಸ್ತರ ನೋವನ್ನು ಆಲಿಸಿ, ಪರಿಹಾರದ ಭರವಸೆ ನೀಡಿದ್ದಾರೆ.

ತ.ನಾಡು ವಿರುದ್ಧ ಕಿಡಿ
ತಮಿಳುನಾಡು ಸರಕಾರವು ಮುಲ್ಲಪೆರಿಯಾರ್‌ ಅಣೆಕಟ್ಟಿನಿಂದ ದಿಢೀರನೆ ನೀರು ಬಿಡುಗಡೆ ಮಾಡಿದ್ದೇ ಕೇರಳದಲ್ಲಿ ಪ್ರವಾಹ ಉಂಟಾಗಲು ಕಾರಣ ಎಂದು ಸುಪ್ರೀಂಕೋರ್ಟ್‌ಗೆ ಕೇರಳ ಸರಕಾರ ಅರಿಕೆ ಮಾಡಿದೆ. ಜಲಾಶಯ ಪೂರ್ಣ ಮಟ್ಟ ತಲುಪುವವರೆಗೂ ಕಾಯದೇ, ನಿಯಂತ್ರಿತವಾಗಿ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಸರಕಾರವನ್ನು ಕೋರಿಕೊಂಡಿದ್ದೆವು. ಆದರೆ ಅವರು ಅದನ್ನು ಅನುಸರಿಸಿಲ್ಲ ಎಂದೂ ಆರೋಪಿಸಿದೆ.

ಉತ್ತರಾಖಂಡದಲ್ಲಿ ಭಾರೀ ಮಳೆ ಮುನ್ಸೂಚನೆ
ಕೇರಳ, ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ, ಪ್ರವಾಹದಿಂದ ಹಾನಿ ಉಂಟಾಗಿರುವ ಬೆನ್ನಲ್ಲೇ ಉತ್ತರಾಖಂಡದಲ್ಲಿ 3 ದಿನಗಳ ಕಾಲ ಭಾರಿ ಮಳೆಯಾಗಲಿದೆ. ಡೆಹ್ರಾಡೂನ್‌, ಉತ್ತರಕಾಶಿ, ಉಧಮ್‌ಸಿಂಗ್‌ ನಗರ ಜಿಲ್ಲೆಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಆ.14ರಿಂದಲೇ ಹಲವೆಡೆ ಮಳೆಯಾಗುತ್ತಿರುವುದರಿಂದ ಈಗಾಗಲೇ ಪ್ರವಾಹದ ಪರಿಸ್ಥಿತಿ ಕಾಣಿಸಿಕೊಂಡಿದೆ. ಹೀಗಾಗಿ ಸ್ಥಳೀಯ ಆಡಳಿತ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಪಾಕ್‌ ಜನತೆಯ ಪರವಾಗಿ ಕೇರಳದ ಪ್ರವಾಹದಿಂದ ಆಗಿರುವ ದುರಂತದ ಬಗ್ಗೆ ಶೋಕ ವ್ಯಕ್ತಪಡಿಸುತ್ತೇನೆ. ಅಗತ್ಯ ಬಿದ್ದರೆ ಯಾವುದೇ ರೀತಿಯ ಮಾನವೀಯ ನೆರವು ನೀಡಲು ಸಿದ್ಧರಿದ್ದೇವೆ.
– ಇಮ್ರಾನ್‌ ಖಾನ್‌, ಪಾಕಿಸ್ಥಾನ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next