Advertisement

ಮಳೆ, ಪ್ರವಾಹಕ್ಕೆ ಅಂಕಪಟ್ಟಿ ನಾಶ; ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

02:03 PM Aug 20, 2018 | Sharanya Alva |

ತಿರುವನಂತಪುರಂ: ದೇವರನಾಡು ಕೇರಳದಲ್ಲಿ ವರುಣನ ಅಬ್ಬರಕ್ಕೆ ಸಾವಿರಾರು ಮಂದಿ ನಿರಾಶ್ರಿತರಾಗಿ, ನೂರಾರು ಜನರು ಪ್ರಾಣ ಕಳೆದುಕೊಂಡಿದ್ದರೆ, ಮತ್ತೊಂದೆಡೆ ದ್ವಿತೀಯ ಪಿಯುಸಿಯ ಸರ್ಟಿಫಿಕೇಟ್ ಮಳೆಗೆ ನಾಶವಾಗಿ ಹೋಗಿದ್ದರಿಂದ ಮನನೊಂದ 19 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ನಡೆದಿದೆ.

Advertisement

ಮಳೆಯ ಅಬ್ಬರಕ್ಕೆ ಕೋಝಿಕೋಡ್ ಜಿಲ್ಲೆಯ ಕಾರ್ನಾತ್ತೂರ್ ನ ತಗ್ಗುಪ್ರದೇಶದಲ್ಲಿದ್ದ ಮನೆ ಸಂಪೂರ್ಣ ಜಲಾವೃತವಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕೈಲಾಶ್ ಹಾಗೂ ತಂದೆ, ತಾಯಿ ನಿರಾಶ್ರಿತರ ಶಿಬಿರಕ್ಕೆ ತೆರಳಿದ್ದರು.

ಕೈಲಾಶ್ ಐಐಟಿ(ಇಂಡಸ್ಟ್ರೀಯಲ್ ಟ್ರೈನಿಂಗ್ ಇನ್ಸಿಟಿಟ್ಯೂಟ್)ಯಲ್ಲಿ ಪ್ರವೇಶ ಸಿಕ್ಕಿತ್ತು. ಹೊಸ ಬಟ್ಟೆಗಳನ್ನೂ ಖರೀದಿಸಿದ್ದ. ಆದರೆ ಮಳೆ ಆತನ ಕನಸನ್ನೆಲ್ಲಾ ನುಚ್ಚು ನೂರು ಮಾಡಿದೆ.

ಭಾನುವಾರ ಕೈಲಾಶ್ ಮನೆಗೆ ಆಗಮಿಸಿದ್ದ..ಜಲಾವೃತಗೊಂಡಿದ್ದರಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರಿಗೆ ಆಹುತಿಯಾಗಿದ್ದವು. ಅದರಲ್ಲಿ ಕೈಲಾಶ್ ನ ದ್ವಿತೀಯ ಪಿಯುಸಿ ಅಂಕಪಟ್ಟಿ ಕೂಡಾ ನಾಶವಾಗಿ ಹೋಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದ. ತದನಂತರ ಕೈಲಾಶ್ ನೇಣಿಗೆ ಶರಣಾಗಿದ್ದ.

ಪ್ರವಾಹದ ನೀರು ತಗ್ಗಿದ್ದರಿಂದ ಮನೆಯನ್ನು ಸ್ವಚ್ಚಗೊಳಿಸಲು ಕೈಲಾಶ್ ತಂದೆ, ತಾಯಿ ಬಮದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿತ್ತು. ತಮ್ಮ ಮಗ ನೇತಾಡುತ್ತಿರುವುದನ್ನು ಕಂಡು ಪೋಷಕರು ಆಘಾತಕ್ಕೊಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಅವರ ಬದುಕಿಗೆ ಆಧಾರವಾಗಿದ್ದ ಮಗನ ಸಾವು ಪೋಷಕರನ್ನು ಕಂಗೆಡಿಸಿತ್ತು. ಅವರ ಆಧಾರ್ ಕಾರ್ಡ್, ರೇಷನ್ ಹಾಗೂ ಎಲ್ಲಾ ದಾಖಲೆ ಪತ್ರಗಳು ನಾಶವಾಗಿ ಹೋಗಿದ್ದವು. ನಾವು ಮಾತ್ರ ಬದುಕಿಕೊಂಡಿದ್ದೇವೆ ಎಂದು ಕೈಲಾಶ್ ಪೋಷಕರು ಅಲವತ್ತುಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next