Advertisement

ನೋವಿನ ಚೀರಾಟ, ಹೊರಬರಲು ಒದ್ದಾಟ, ರಕ್ತ ಮೆತ್ತಿದ ಬಟ್ಟೆಗಳು:ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು!

02:40 PM Aug 08, 2020 | keerthan |

ಕೋಯಿಕ್ಕೋಡ್: ನೋವಿನ ಚೀರಾಟ, ರಕ್ತ ಮೆತ್ತಿದ ಬಟ್ಟೆಗಳ ಮಧ್ಯೆ ಜೀವ ಉಳಿಸಿಕೊಳ್ಳಲು ಒದ್ದಾಟ, ಧಾರಾಕಾರ ಸುರಿಯುತ್ತಿರುವ ಮಳೆ, ಅಳುತ್ತಿರುವ ಮಕ್ಕಳು, ಚೀರುತ್ತಿರುವ ಆ್ಯಂಬೆಲೆನ್ಸ್ ನ ಸೈರನ್.. ಕೋಯಿಕ್ಕೋಡ್ ನ ಕರಿಪುರ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಕಂಡುಬಂದ ಮನಕಲಕುವ ದೃಶ್ಯಗಳು!

Advertisement

ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಕೇರಳ ರಾಜ್ಯದ ಕೋಯಿಕ್ಕೋಡ್ ಗೆ ಆಗಮಿಸುತ್ತಿದ್ದ ಏರ್ ಇಂಡಿಯಾದ ಐಎಕ್ಸ್-344 ವಿಮಾನವು ರನ್ ವೇ ನಲ್ಲಿ ಜಾರಿ ಅನಾಹುತ ಸಂಭವಿಸಿತ್ತು. ಘಟನೆಯಲ್ಲಿ ಇದುವರೆಗೆ 20 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ವಿಮಾನವು ರನ್ ವೇನಿಂದ ಜಾರಿ ಕಂದಕ್ಕೆ ಬಿದ್ದು ಎರಡು ತುಂಡಾಗಿತ್ತು. ಭಾರಿ ಮಳೆಯಿದ್ದ ಕಾರಣ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿರಲಿಲ್ಲ. ಆದರೆ ಭಾರಿ ಮಳೆಯ ಕಾರಣ ಕಾರ್ಯಾಚರಣೆಗೂ ಅಡ್ಡಿಯಾಗಿತ್ತು.

ಕೋವಿಡ್ ಕಾರಣದಿಂದ ಕಳೆದು ನಾಲ್ಕು ತಿಂಗಳಿನಿಂದ ದೂರದ ಗಲ್ಫ್ ದೇಶದಲ್ಲಿ ಆತಂಕದಲ್ಲಿದ್ದು, ಇದೀಗ ಮನೆಯಂಗಳ ತಲಪಿದೆವು ಎಂದು ಸಮಾಧಾನ ಪಟ್ಟಿದ್ದ ಪ್ರಯಾಣಿಕರಿಗೆ ಕ್ಷಣದಲ್ಲಿ ಏನು ನಡೆದಿದೆ ಎಂದೇ ತಿಳಿಯಲಿಲ್ಲ. ವರ್ಷವೂ ತುಂಬಿರದ ಹಸುಳೆಗಳು, ವೃದ್ಧರು, ಮಹಿಳೆಯರು ಆತಂಕದಲ್ಲಿದ್ದರು. ಚೀರಾಟ ಮುಗಿಲು ಮುಟ್ಟಿತ್ತು.

Advertisement

ಮಳೆಯ ನಡುವೆಯೂ ವಿಮಾನ ನಿಲ್ದಾಣ ಸಿಬ್ಬಂದಿಗಳು, ಸ್ಥಳೀಯ ಪೊಲೀಸರು, ಜನತೆ ಸೇರಿ ಜನರನ್ನು ರಕ್ಷಿಸಲು ಮುಂದಾಗಿದ್ದರು. ಪ್ರಯಾಣಿಕರನ್ನು ಹೊರತೆಗೆಯಲು ಹರಸಾಹಸವೇ ಪಡಬೇಕಾಯಿತು. ಅನಾಹುತದಲ್ಲಿ ಪೋಷಕರು, ತಂದೆ ತಾಯಿ ಎಲ್ಲಿದ್ದಾರೆ ಎಂದೂ ಗೊತ್ತಾಗದ 4-5 ವರ್ಷದ ಮಕ್ಕಳು ತಮ್ಮನ್ನು ಈ ಯಾತನೆಯಿಂದ ಕಾಪಾಡಿ ಎಂದು ಮೊರೆಯಿಡುತ್ತಿದ್ದರು.

ಇದನ್ನೂ ಓದಿ: ಏನಿದು ಟೇಬಲ್ ಟಾಪ್ ರನ್ ವೇ? ಭಾರತದಲ್ಲಿ ಎಷ್ಟಿವೆ? ಇವು ಯಾಕೆ ಅಪಾಯಕಾರಿ?

ವಿಮಾನದ ಸೀಟುಗಳ ನಡುವೆ ಸಿಲುಕಿದ್ದರು. ಅಳಿತ್ತಿದ್ದ, ತಂದೆ ತಾಯಿಯನ್ನು ಕಾಣದೆ ಒದ್ದಾಡುತ್ತಿದ್ದ ಮಕ್ಕಳನ್ನು ನೋಡುವಾಗ ಮನಸ್ಸಿಗೆ ನೋವಾಗುತ್ತಿತ್ತು ಎಂದು ವಿಮಾನ ನಿಲ್ದಾಣದ ಬಳಿ ದೊಡ್ಡ ಶಬ್ಧ ಕೇಳಿ ಬಂದ ಸ್ಥಳೀಯ ವ್ಯಕ್ತಿಯೊಬ್ಬರು ಹೇಳುತ್ತಾರೆ.

ನಾವು ಸ್ಥಳಕ್ಕೆ ಧಾವಿಸಿದಾಗ ಕೆಲವರು ಆಗಲೇ ವಿಮಾನದಿಂದ ಕೆಳಕ್ಕೆ ಇಳಿದಿದ್ದರು. ಕೆಲವು ನೋವಿನಿಂದ ಚೀರುತ್ತಿದ್ದರು. ತುಂಬಾ ಜನರು ಗಾಯಗೊಂಡಿದ್ದರು. ಕೆಲವರ ಕಾಲುಗಳೇ ತುಂಡಾಗಿದ್ದವು. ನನ್ನ ಕೈ ಮತ್ತು ಬಟ್ಟೆ ರಕ್ತದಿಂದ ತುಂಬಿ ಹೋಗಿತ್ತು ಎನ್ನುತ್ತಾರೆ ಅವರು!

ಇದನ್ನೂ ಓದಿ:  ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ

ಅಲ್ಲಿಂದ ಕೂಡಲೇ ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಹಲವರು ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next