ತಿರುವನಂತಪುರಂ: ದೇಶದ 75ನೇ ಸ್ವಾತಂತ್ರ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ನಡುವೆಯೇ ಕೇರಳದ ಪಾಲಕ್ಕಾಡಿನಲ್ಲಿ ಗುರುವಾರ (ಆಗಸ್ಟ್ 04) ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಜಸ್ಟೀಸ್ ಯುಯು ಲಲಿತ್ ಸುಪ್ರೀಂಕೋರ್ಟ್ ನ ನೂತನ ಸಿಜೆಐ: ಎನ್ ವಿ ರಮಣ್ ಶಿಫಾರಸು
ಸುಮಾರು 40 ರಟ್ಟಿನ ಬಾಕ್ಸ್ ಗಳಲ್ಲಿ ತುಂಬಿಸಿಟ್ಟಿದ್ದ 8,000 ಜಿಲೆಟಿನ್ ಕಡ್ಡಿಗಳು ಸೇರಿದಂತೆ ಇತರ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಭಾರೀ ಪ್ರಮಾಣದ ಸ್ಫೋಟಕದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕ್ವಾರಿಯಲ್ಲಿ ಬಂಡೆಗಳನ್ನು ಒಡೆಯಲು ಜಿಲೆಟಿನ್ ಕಡ್ಡಿಗಳನ್ನು ಬಳಕೆ ಮಾಡುತ್ತಿದ್ದರಬಹುದು ಎಂದು ಶಂಕಿಸಲಾಗಿದೆ ಎಂಬುದಾಗಿ ವರದಿ ವಿವರಿಸಿದೆ. 2000 ಇಸವಿ ನವೆಂಬರ್ ನಲ್ಲಿ ಪೊಲೀಸರು 7,500 ಡಿಟೋನೇಟರ್ಸ್ ಮತ್ತು 7,000 ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದರು ಎಂದು ವರದಿ ವಿವರಿಸಿದೆ.’
ತಮಿಳುನಾಡಿನ ಈರೋಡ್ ನಿಂದ ಎರ್ನಾಕುಳಂ ಜಿಲ್ಲೆಯ ಅಂಗಮಲೈಗೆ ಈ ಸ್ಫೋಟಕಗಳನ್ನು ಸಾಗಿಸುವಾಗ ಜಿಲೆಟಿನ್ ಕಡ್ಡಿಗಳ ಮೇಲೆ ಟೊಮೆಟೊ ಹಾಕಿ ಮುಚ್ಚಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
2020ರ ಸೆಪ್ಟೆಂಬರ್ ನಲ್ಲಿ ಅಕ್ರಮ ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಎರ್ನಾಕುಲಂನ ಕಾಲಡಿ ಪ್ರದೇಶದಲ್ಲಿ ನಡೆದಿತ್ತು. ಗಣಿಗಾರಿಕೆಗಾಗಿ ಬಂಡೆಗಳನ್ನು ಒಡೆಯಲು ಅನುಮತಿ ಇಲ್ಲದೇ ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಿ ಇಟ್ಟಿರುವುದಾಗಿ ವರದಿ ವಿವರಿಸಿದೆ.