ತಿರುವನಂತಪುರಂ: ಬೀದಿ ನಾಯಿಗಳಿಗೆ ಆಹಾರವನ್ನು ನೀಡಿ ಅದನ್ನು ಸಲಹುವವರು ತುಂಬಾ ಮಂದಿ ಇರುತ್ತಾರೆ. ಆದರೆ ಅದೇ ಬೀದಿ ನಾಯಿ ಪ್ರಾಣಕ್ಕೆ ಆಪತ್ತು ತಂದರೆ ಹೇಗೆ? ಇಂಥದ್ದೇ ಒಂದು ಘಟನೆ ಇತ್ತೀಚೆಗೆ ಕೇರಳದಲ್ಲಿ ನಡೆದಿರುವುದು ವರದಿಯಾಗಿದೆ.
ತಿರುವನಂತಪುರಂನ ಚಿರಾಯಿಂಕೀಝು ಮೂಲದ ಸ್ಟೆಫಿನ್ ವಿ ಪಿರೇರಾ (49) ಎಂಬ ಮಹಿಳೆ ಬೀದಿ ನಾಯಿಗಳಿಗೆ ಸದಾ ಆಹಾರವನ್ನು ನೀಡುತ್ತಿದ್ದರು. ರಸ್ತೆಬದಿಯ ನಾಯಿಗಳಿಗೆ ಆಹಾರವನ್ನು ನೀಡುವ ಜೊತೆಗೆ ಅವುಗಳನ್ನು ಸಲಹುತ್ತಿದ್ದರು. ಇತ್ತೀಚೆಗೆ ಅವರು ಬೀದಿ ನಾಯಿಯೊಂದಿಗೆ ಆಹಾರವನ್ನು ನೀಡುವಾಗ, ನಾಯಿಯೊಂದು ಉಗುರುಗಳಿಂದ ಪರಚಿದೆ.
ಇದಾದ ಬಳಿಕ ಜೂನ್ 9 ರಂದು ಸ್ಟೆಫಿನ್ ವಿ ಪಿರೇರಾ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಕಾರಣದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರೀಕ್ಷಿಸಿದ ವೈದ್ಯರು ರೇಬೀಸ್ ರೋಗ ಲಕ್ಷಣವನ್ನು ಪತ್ತೆ ಹಚ್ಚಿದ್ದಾರೆ. ಇದು ಹೇಗೆ ಬಂತು ಎನ್ನುವುದನ್ನು ವೈದ್ಯರು ಕೇಳಿದಾಗ ಬೀದಿ ನಾಯಿ ಪರಚಿದ ಬಗ್ಗೆ ಹೇಳಿದ್ದಾರೆ.
ರೇಬೀಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿಧನರಾಗಿದ್ದಾರೆ. ಕಳೆದ ಕೆಲ ಸಮಯದಿಂದ ಬೀದಿ ನಾಯಿಗಳ ಹಾವಳಿಯ ಆತಂಕದ ನಡುವೆಯೇ ಕೇರಳದಾದ್ಯಂತ ರೇಬಿಸ್ ಪ್ರಕರಣಗಳು ವರದಿಯಾಗುತ್ತಿವೆ.