ಉಳ್ಳಾಲ: ಮಂಗಳೂರಿನಲ್ಲಿ ಪೊಲೀಸರು ಇಬ್ಬರು ಅಮಾಯಕರ ಮೇಲೆ ಗೋಲಿಬಾರ್ ನಡೆಸಿದ್ದು, ಆ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಕೇರಳ ಶಾಸಕ ಸಂಶುದ್ದೀನ್ ಆಗ್ರಹಿಸಿದ್ದಾರೆ.
ಕಣ್ಣೂರು ಸಂಸದ ಕೆ. ಸುಧಾಕರನ್ ಮತ್ತು ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನೇತೃತ್ವದಲ್ಲಿ ಯುಡಿಎಫ್ ನಿಯೋಗ ಮಂಗಳೂರು ಗೋಲಿಬಾರ್‌ನಲ್ಲಿ ಮಡಿದವರ ಮನೆಗೆ ಸೋಮವಾರ ಭೇಟಿ ನೀಡಿದ ಅನಂತರ ತೊಕ್ಕೊಟ್ಟಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಮಂಗಳೂರಿನಲ್ಲಿ ನಡೆದ ಕಲ್ಲು ತೂರಾಟದಲ್ಲಿ ಕೇರಳದವರ ಪಾತ್ರವಿದೆ ಎನ್ನುವ ಕರ್ನಾಟಕದ ಗೃಹ ಸಚಿವರ ಹೇಳಿಕೆ ಸತ್ಯಕ್ಕೆ ದೂರ. ಸತ್ಯಾಸತ್ಯತೆಯನ್ನು ಅವಲೋಕಿಸುವ ನಿಟ್ಟಿನಲ್ಲಿ ನಿಯೋಗ ಮಂಗಳೂರಿಗೆ ಭೇಟಿ ನೀಡಿದೆ. ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವವರಲ್ಲಿ ಕೇರಳ ಮೂಲದವರು ಇಲ್ಲ.
ಕೇರಳದ ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆಯುವ ಮೂಲಕ ಪತ್ರಿಕಾ ಸ್ವಾತಂತ್ರದ ಹರಣವಾಗಿದೆ ಎಂದ ಅವರು, ಪೊಲೀಸರು ಫೈರಿಂಗ್ ಸಂದರ್ಭ ಕಾನೂನು ಪಾಲಿಸಿಲ್ಲ. ಈ ವಿಚಾರದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಸಂಸತ್‌ನಲ್ಲಿ ನಮ್ಮ ನಿಯೋಗ ಧ್ವನಿ ಎತ್ತುತ್ತದೆ ಎಂದರು.
ಮಂಜೇಶ್ವರ ಶಾಸಕ ಎಂ.ಸಿ. ಕಮರುದ್ದಿನ್ ಮಾತನಾಡಿ, ಮಲ ಯಾಳಿಗರು ಮತ್ತು ಕನ್ನಡಿಗರು ಸಹೋದರಂತಿದ್ದಾರೆ. ಇಂತಹ ಘಟನೆ ಎರಡೂ ಭಾಷಿಕರ ನಡುವೆ ವೈರತ್ವಕ್ಕೆ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಕೇರಳ ಮೂಲದ ಅನೇಕರು ವಿದ್ಯಾರ್ಥಿಗಳಿದ್ದಾರೆ ಎಂದರು.