ತಿರುವನಂತಪುರಂ: ಕೇರಳ ಸರ್ಕಾರ ದೇಶ ದ್ರೋಹಿಗಳಿಗೆ ಬೆಂಬಲ ನೀಡುತ್ತಿದೆ ಎಂದಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದು ,’ಸ್ವಾತಂತ್ರ್ಯ ಹೋರಾಟಕ್ಕೆ ಬೆನ್ನು ತೋರಿಸಿ ವಸಾಹತುಶಾಹಿ ಬ್ರಿಟೀಷರಿಗೆ ಸೇವೆ ಸಲ್ಲಿಸಿದ ಆರ್‌ಎಸ್‌ಎಸ್‌ನಿಂದ ಕೇರಳಿಗರು ರಾಷ್ಟ್ರೀಯತೆಯ ಪಾಠ ಕಲಿಯಬೇಕಾಗಿಲ್ಲ’ ಎಂದು ಕಿಡಿ ಕಾರಿದ್ದಾರೆ.
ಭಾನುವಾರ ಕೇರಳದ ದೆಹಲಿ ಘಟಕದ ಕಾರ್ಯ ನಿರತ ಪತ್ರಕರ್ತರ ಸಂಘದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವಿಜಯನ್ ‘ಆರ್‌ಎಸ್‌ಎಸ್ ಧಾರ್ಮಿಕ ಅಲ್ಪಸಂಖ್ಯಾತರನ್ನು ದೇಶದ ಆಂತರಿಕ ಭದ್ರತೆಗೆ ಅಪಾಯ ಎಂದು ಪರಿಗಣಿಸಿದೆ’ ಎಂದರು.
‘ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಹೇಳಿಕೆ ಪ್ರತೀ ಕೇರಳಿಗನಿಗೆ ಹಾಕಿದ ಸವಾಲಾಗಿದೆ’ ಎಂದರು.
‘ದೇಶದ ಪ್ರಸ್ತುತ ಮಾಧ್ಯಮಗಳ ಸ್ಥಿತಿ ಅತ್ತಂತ ಕಳಪೆಯಾಗಿದ್ದು ಮಾಧ್ಯಮಗಳಲ್ಲಿ ತೀವ್ರ ಬಲಪಂಥೀಯ ವಿಚಾರಗಳ ಹೇರಿಕೆಯಾಗಿದೆ ಎಂದು ವರದಿ ಹೇಳುತ್ತದೆ. ಇದು ಅಪಾಯಕಾರಿ’ ಎಂದರು.
‘ಕೇರಳದ ಪತ್ರಕರ್ತರು ರಾಜ್ಯದ ಅನಧಿಕೃತ ರಾಯಭಾರಿಗಳಂತೆ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.