ಕೇರಳ: ಕೋವಿಡ್ -19 ಲಾಕ್ ಡೌನ್ ಸಮಯದಲ್ಲಿ ತನ್ನೊಂದಿಗೆ ಆಟವಾಡದಿದ್ದಕ್ಕೆ ಮತ್ತು ಬೆದರಿಕೆಯೊಡ್ಡಿದ ಕಾರಣವಾಗಿ ಎಂಟು ವರ್ಷದ ಬಾಲಕನೋರ್ವ ತನ್ನ ಸಹೋದರಿ ಸೇರಿದಂತೆ 5 ಬಾಲಕಿಯರ ಮೇಲೆ ಪೊಲೀಸರಿಗೆ ದೂರು ನೀಡಿದ ಘಟನೆ ಕೇರಳದಲ್ಲಿ ನಡೆದಿದೆ.
ಉಮರ್ ನಿಧಾರ್ ಎಂಬ 8 ವರ್ಷದ ಬಾಲಕನ ದೂರು ಕೇಳಿ ಪೊಲೀಸರು ಬೆಕ್ಕಸ ಬೆರಗಾಗಿದ್ದಾರೆ. ಮಾತ್ರವಲ್ಲದೆ ಕೂಡಲೇ ಐವರು ಬಾಲಕಿಯರನ್ನು ಅರೆಸ್ಟ್ ಮಾಡುವಂತೆ ಕೋರಿಕೊಂಡಿದ್ದಾನೆ. ನಾನು ಹುಡುಗ ಎಂಬ ಕಾರಣಕ್ಕಾಗಿ ಐವರು ಹುಡುಗಿಯರು ನನ್ನನ್ನು ತಮಾಷೆ ಮಾಡುತ್ತಿದ್ದು, ಅವರೊಂದಿಗೆ ಲೂಡೋ, ಶಟಲ್, ಕಳ್ಳ-ಪೊಲೀಸ್ ಆಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಇದಕ್ಕೂ ಮೊದಲು ಉಮರ್ ತನ್ನ ತಂದೆಗೆ ಈ ಕುರಿತು ದೂರು ನೀಡಿದ್ದು ಅವರು ಪೊಲೀಸರಿಗೆ ಕಂಪ್ಲೇಟ್ ಕೊಡುವಂತೆ ತಮಾಷೆಯಾಗಿ ಹೇಳಿದ್ದಾರೆ. ಇದನ್ನೇ ನಂಬಿದ ಮುಗ್ಧ ಹುಡುಗ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಐವರು ಬಾಲಕಿಯರಲ್ಲಿ ಕೆಲವರು ಈತನ ನೆರೆಹೊರೆಯವರಾಗಿದ್ದಾರೆ.
ಮೇ 10 ರಂದು ಬಾಲಕ ವಾಸವಿದ್ದ ಮನೆಯ ಸಮೀಪದಲ್ಲೇ ಮತ್ತೊಂದು ಕೇಸಿನ ವಿಚಾರಣೆ ನಡೆಸಲು ತೆರಳಿದ್ದ ಪೊಲೀಸರಿಗೆ 3ನೇ ತರಗತಿಯ ಈ ಬಾಲಕ ಸ್ಪಷ್ಟ ಇಂಗ್ಲಿಷ್‌ನಲ್ಲಿ ಬರೆದ ದೂರಿನ ಪ್ರತಿಯನ್ನು ನೀಡಿದ್ದಾನೆ. ಆದರೆ ಅಂದು ಸಂಜೆ ತಡವಾಗಿದ್ದರಿಂದ, ಪೊಲೀಸರಿಗೆ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಆ ಕಾರಣಕ್ಕಾಗಿ ಮರುದಿನ ಬಾಲಕನ ಮನೆಗೆ ಭೇಟಿ ನೀಡಿದ ಕಸ್ಬಾ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಉಮೇಶ್ ಮತ್ತು ಕೆಟಿ ನಿರಾಜ್ ಎಂಬುವವರು ಐವರು ಬಾಲಕಿಯರಿಗೆ ಮತ್ತು ಉಮರ್ ಗೆ ಕೆಲವು ಸಲಹೆ ನೀಡಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.