ತ್ರಿಶ್ಶೂರ್: ನಕಲಿ ನೋಟು ದಂಧೆ ನಡೆಸುತ್ತಿದ್ದ ಭಾರತೀಯ ಜನತಾ ಪಕ್ಷದ ಯುವಮೋರ್ಚಾ (ಬಿಜೆವೈಎಂ) ಸಮಿತಿಯ ಮುಖಂಡನನ್ನು ಬಂಧಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ನಕಲಿ ನೋಟು ಮುದ್ರಿಸುತ್ತಿದ್ದ ಕೇರಳ ತ್ರಿಶ್ಶೂರಿನ ರಾಕೇಶ್ ಎಝಾಚೆರ್ರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಸುಮಾರು 1.5 ಲಕ್ಷ ರೂಪಾಯಿಯಷ್ಟು ನಕಲಿ ನೋಟು ಹಾಗೂ ಯಂತ್ರ ಮತ್ತು ಮುದ್ರಣಕ್ಕೆ ಉಪಯೋಗಿಸುವ ಇಂಕ್ ಅನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಪೊಲೀಸ್ ಮೂಲಗಳ ಪ್ರಕಾರ, ರಾಕೇಶ್ ಹಾಗೂ ಆತನ ಸಹೋದರ ನಕಲಿ ನೋಟಿನ ದಂಧೆ ನಡೆಸುತ್ತಿದ್ದರು. ತಮ್ಮ ಮನೆಯ ಮೊದಲ ಮಹಡಿಯಲ್ಲಿ 2000, 500, 20 ಹಾಗೂ 50 ರೂಪಾಯಿ ಮುಖಬೆಲೆಯ ನಕಲಿ ನೋಟನ್ನು ಮುದ್ರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಇಬ್ಬರು ಸಹೋದರರು ನಕಲಿ ನೋಟನ್ನು ಸ್ಥಳೀಯ ಅಂಗಡಿಗಳಲ್ಲಿ ಮತ್ತು ಪೆಟ್ರೋಲ್ ಬಂಕ್ ಗಳಲ್ಲಿ ಉಪಯೋಗಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮದ ವರದಿ ಹೇಳಿದೆ. ಏತನ್ಮಧ್ಯೆ ರಾಕೇಶ್ ಬಂಧನ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ ವ್ಯಂಗ್ಯದ ಬರಹಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.