ತಿರುವನಂತಪುರ: ಈ ವರ್ಷದ ಏಪ್ರಿಲ್-ಮೇನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳ ವಿಧಾನಸಭೆಯ ಬಜೆಟ್ ಅಧಿವೇಶನಕ್ಕೆ ಕೋಲಾಹಾಲದ ಆರಂಭ ಸಿಕ್ಕಿದೆ. ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಭಾಗಿಯಾಗಿದ್ದಾರೆ ಎಂಬ ವಿಚಾರ ಸೇರಿದಂತೆ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರದ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಯುಡಿಎಫ್ ಗದ್ದಲ ಎಬ್ಬಿಸಿತು. ಗಲಾಟೆಯ ನಡುವೆಯೇ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಾಷಣ ಮಾಡಿದರು.
ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ನೇತೃತ್ವದಲ್ಲಿ ಶಾಸಕರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ವಿರುದ್ಧ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ರಾಜ್ಯಪಾಲ ಖಾನ್ “ಬಜೆಟ್ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣ ಸಂವಿಧಾನದತ್ತವಾಗಿರುವ ಅಂಶ.
ಅದಕ್ಕೆ ಯಾರೂ ಅಡ್ಡಿಪಡಿಸಬಾರದು’ ಹೇಳಿದರು. ಇದರ ಹೊರತಾಗಿಯೂ ಪ್ರತಿಪಕ್ಷಗಳ ಸದಸ್ಯರು ಸುಮ್ಮನಾಗದಿದ್ದಾಗ ಮತ್ತೂಮ್ಮೆ “ಗದ್ದಲ ಮಾಡಬೇಡಿ’ ಎಂದು ರಾಜ್ಯಪಾಲರು ಮನವಿ ಮಾಡಿದರು. ನಂತರ ಪ್ರತಿಪಕ್ಷಗಳ ಶಾಸಕರು ಭಾಷಣ ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು. ಬಿಜೆಪಿಯ ಏಕೈಕ ಶಾಸಕ ಓ.ರಾಜಗೋಪಾಲ್ ಪ್ರತಿಭಟನೆಯಲ್ಲಿ ಭಾಗವಹಿಸದೆ ಶಾಂತ ಚಿತ್ತರಾಗಿ ಭಾಷಣ ಆಲಿಸಿದರು.
ಇದನ್ನೂ ಓದಿ:ಕೊಂಕಣಿ ಅಕಾಡೆಮಿ ಸ್ಥಾಪನೆಗೆ ದೆಹಲಿ ಸರ್ಕಾರ ಅನುಮೋದನೆ
ಸ್ಪೀಕರ್ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಕೆ.ಅಯ್ಯಪ್ಪನ್ ಚಿನ್ನ ಸಾಗಣೆ ಪ್ರಕರಣದಲ್ಲಿ ಶುಕ್ರವಾರ ಕಸ್ಟಮ್ಸ್ ಇಲಾಖೆ ಮುಂದೆ ವಿಚಾರಣೆಗೆ ಹಾಜರಾದದ್ದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣ.
ಕೇಂದ್ರದ ವಿರುದ್ಧ ಆಕ್ರೋಶ: ರಾಜ್ಯಪಾಲರ ಎರಡು ಗಂಟೆ ಹತ್ತು ನಿಮಿಷಗಳ ಕಾಲದ ಭಾಷಣದಲ್ಲಿ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ರಾಜ್ಯ ಸರ್ಕಾರ ಹೊಂದಿರುವ ನಿಲುವುಗಳನ್ನು ಓದಿದರು. ಜತೆಗೆ ಡಿ.31ರಂದು ನಡೆದ ವಿಶೇಷ ಅಧಿವೇಶನದಲ್ಲಿ ರೈತ ಕಾಯ್ದೆಗಳ ವಿರುದ್ಧ ಕೈಗೊಳ್ಳಲಾಗಿರುವ ನಿರ್ಣಯವನ್ನೂ ರಾಜ್ಯಪಾಲರು ಓದಿದರು.