ಗುರುವಾಯೂರು, ಕೇರಳ : ‘ವಾರಾಣಸಿ ನನಗೆ ಎಷ್ಟು ಪ್ರಿಯವೋ ಕೇರಳ ಕೂಡ ಅಷ್ಟೇ ಪ್ರಿಯವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದರು.
ಶ್ರೀಕೃಷ್ಣನ ಪ್ರಸಿದ್ಧ ಗುರುವಾಯೂರು ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತುಲಾಭಾರ ಸೇವೆ ಅರ್ಪಿಸಿದ ಪ್ರಧಾನಿ ಮೋದಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಮರಳಿದ ಬಳಿಕದಲ್ಲಿ ತಾನು ಪ್ರಧಾನಿಯಾಗಿ ಕೇರಳಕ್ಕೆ ಸರ್ವಪ್ರಥಮ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದರು.
ವಿಶ್ವದ ಅತೀ ದೊಡ್ಡ ಪ್ರಜಾಸತ್ತೆಯಾಗಿರುವ ಭಾರತ 2019ರ ಲೋಕಸಭಾ ಚುನಾವಣೆಯ ಮೂಲಕ ಆಚರಿಸಿದ ಭವ್ಯ ಪ್ರಜಾಸತ್ತೆಯ ಹಬ್ಬದಲ್ಲಿ ಕೇರಳಿಗರು ಪರಿಪೂರ್ಣವಾಗಿ ಭಾಗವಹಿಸಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಪ್ರಶಂಸಿಸಿದರು.
ಕೇರಳದಿಂದ ಒಬ್ಬನೇ ಒಬ್ಬ ಬಿಜೆಪಿ ಸಂಸದ ಲೋಕಸಭೆಗೆ ಬಂದಿಲ್ಲವಾದರೂ ನನಗೆ ವಾರಣಾಸಿಷ್ಟೇ ಕೇರಳವೂ ಪ್ರಿಯವಾಗಿದೆ ಎಂದು ಮೋದಿ ಹೇಳಿದರು.
ರಾಜಕೀಯ ಎದುರಾಳಿ ಪಕ್ಷಗಳು ಮತ್ತು ಪಂಡಿತರು ಲೋಕಸಭಾ ಚುನಾವಣೆಗೆ ಮುನ್ನ ಜನರ ನಾಡಿಮಿಡಿತವನ್ನು ಅರಿಯುವಲ್ಲಿ ಸಂಪೂರ್ಣ ವಿಫಲರಾದರು ಎಂದು ಹೇಳಿದ ಮೋದಿ, ಭಾರತೀಯ ಜನತಾ ಪಕ್ಷದಲ್ಲಿ ಇರಿಸಿರುವ ವಿಶ್ವಾಸಕ್ಕಾಗಿ ಮತದಾರರಿಗೆ ಕೃತಜ್ಞತೆ ಅರ್ಪಿಸಿದರು.
ಬಿಜೆಪಿಯ ಕೇರಳ ಘಟಕ ಏರ್ಪಡಿಸಿದ ಅಭಿನಂದನ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಚುನಾವಣೆಗಳಲ್ಲಿ ಮತದಾರರೇ ದೇವರು ಎಂಬುದನ್ನು ದೇಶವು ಕಂಡಿದೆ ಎಂದು ಹೇಳಿದರು.