ತಿರುವನಂತಪುರಂ:ನಕಲಿ ನೋಟುಗಳ ಮುದ್ರಣದ ಜಾಲದಲ್ಲಿ ತೊಡಗಿದ್ದ ಕೇರಳದ ಕಿರುತೆರೆ ನಟಿ ಸೂರ್ಯ ಶಶಿಕುಮಾರ್, ಆಕೆಯ ತಾಯಿ ಹಾಗೂ ಸಹೋದರಿಯನ್ನು ಕೊಲ್ಲಂ ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಕೇರಳ ಮೂಲದ ಟಿವಿ ಚಾನೆಲ್ ಗಳು ಪ್ರಸಾರ ಮಾಡುವ ಹಲವಾರು ಧಾರವಾಹಿಗಳಲ್ಲಿ ಸೂರ್ಯ ನಟಿಸುತ್ತಿದ್ದು, ಜನಪ್ರಿಯ ಕಿರುತೆರೆ ನಟಿಯಾಗಿ ಹೆಸರು ಗಳಿಸಿದ್ದಳು.
ಸರ್ಕಲ್ ಇನ್ಸ್ ಪೆಕ್ಟರ್ ವಿಎಸ್ ಸುನೀಲ್ ಕುಮಾರ್ ಅವರ ನೇತೃತ್ವದ ತಂಡ ನಟಿ ಸೂರ್ಯ ಹಾಗೂ ಆಕೆಯ ಮನೆಯವರನ್ನು ಬುಧವಾರ ಬಂಧಿಸಿದ್ದರು. ಐಎಎನ್ ಎಸ್ ಜತೆ ಮಾತನಾಡಿದ ಸುನೀಲ್ ಕುಮಾರ್, ನಟಿ ಸೂರ್ಯ ಮನೆಯಲ್ಲಿ ಪ್ರಿಂಟಿಂಗ್ ಮೆಷಿನ್ ಅನ್ನು ಜಪ್ತಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಗುರುವಾರ ಮತ್ತಿಬ್ಬರು ಸಹಾಯಕರನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 8ಕ್ಕೆ ಏರಿರುವುದಾಗಿ ವಿವರಿಸಿದ್ದಾರೆ. ಬಂಧಿತರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಸುಮಾರು 2 ಲಕ್ಷ ರೂಪಾಯಿಯಷ್ಟು ನಕಲಿ ನೋಟು ವಶಪಡಿಸಿಕೊಂಡಿದ್ದು, ಅಲ್ಲದೇ ಪೇಪರ್ಸ್, ಪ್ರಿಂಟರ್ಸ್ ಹಾಗೂ ನಕಲಿ ನೋಟುಗಳಿಗೆ ಉಪಯೋಗಿಸುವ ಬಣ್ಣ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಸುಮಾರು 5 ಲಕ್ಷ ರೂಪಾಯಿ ಮೌಲ್ಯದಷ್ಟು ನಕಲಿ ನೋಟುಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿರುವುದಾಗಿ ಶಶಿಕುಮಾರ್ ತಿಳಿಸಿದ್ದಾರೆ.