ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ಸೋಂಕು ಪ್ರಮಾಣ ಮತ್ತೆ ಹೆಚ್ಚುತ್ತಿದೆ. ಕೆಲ ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಸೋಂಕು ಮತ್ತೆ ಏರಿಕೆಯಾಗಲು ಆರಂಭವಾಗಿದ್ದು, ದೇಶದಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 45,083 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಈ ಅವಧಿಯಲ್ಲಿ 460 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಮಾಹಿತಿಯನ್ವಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,26,95,030ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,37,830ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,68,558ಕ್ಕೆ ತಲುಪಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 35,840 ಮಂದಿ ಗುಣಮುಖರಾಗಿದ್ದು, ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,18,88,642ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಟ್ಯಾಟೂ ನೀಡಿದ ಸಾಕ್ಷಿ: ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ ಟ್ಯಾಟೂ
ಕೇವಲ ಐದು ರಾಜ್ಯಗಳಲ್ಲಿ ಒಟ್ಟು ಪ್ರಕರಣಗಳ ಶೇ .89.17 ರಚ್ಟು ಪ್ರಕರಣಗಳು ಕಂಡುಬರುತ್ತಿದೆ. ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 31,265 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 4,831 ಪ್ರಕರಣಗಳು, ತಮಿಳುನಾಡು 1,551 ಪ್ರಕರಣಗಳು, ಆಂಧ್ರಪ್ರದೇಶದಲ್ಲಿ 1,321 ಪ್ರಕರಣಗಳು ಮತ್ತು ಕರ್ನಾಟಕದಲ್ಲಿ 1,229 ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲೂ ದೇಶದಲ್ಲಿ ಪತ್ತೆಯಾಗುತ್ತಿರುವ ಒಟ್ಟು ಪ್ರಕರಣಗಳಲ್ಲಿ ಶೇ.69.35ರಷ್ಟು ಸೋಂಕು ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ಪತ್ತೆಯಾಗುತ್ತಿದೆ.
ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 63.09 ಕೋಟಿ ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ