ಕೊಚ್ಚಿ: ಅದೃಷ್ಟ ಚೆನ್ನಾಗಿದ್ದರೆ ಸಾವಿನ ದವಡೆಯಿಂದಲೂ ಬದುಕಿಬರಬಹುದು. ನಮ್ಮ ಜೀವನದ ಆಯುಷ್ಯ ಎಷ್ಟು ಎನ್ನುವುದು ಯಾರಿಗೂ ಗೊತ್ತಿಲ್ಲ. ಪವಾಡಸದೃಶ ರೀತಿಯಲ್ಲಿ ವೃದ್ಧೆಯೊಬ್ಬರು ಬದುಕಿ ಬಂದಿರುವ ಘಟನೆ ಕೇರಳದಲ್ಲಿ ನಡೆದಿರುವುದು ವರದಿಯಾಗಿದೆ.
ಗುರುವಾರ ಸಂಜೆ ಪುನೂರು ನದಿಗೆ ಅನಕ್ಕಯಂ ನಿವಾಸಿಯಾಗಿರುವ ಕಮಲಾಕ್ಷಿ (78) ಅವರು ಸ್ನಾನಕ್ಕೆಂದು ಇಳಿದಿದ್ದಾರೆ. ಈ ವೇಳೆ ನದಿಯಲ್ಲಿನ ನೀರಿನ ರಭಸಕ್ಕೆ ವೃದ್ಧೆ ಕಮಲಾಕ್ಷಿ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ಆದರೆ ಛಲ ಬಿಡದೆ ಕಮಲಾಕ್ಷಿ ನೀರಿನ ರಭಸದ ವಿರುದ್ಧವಾಗಿ ಗಿಡಗಳ ಗೆಲ್ಲುಗಳನ್ನು ಹಿಡಿದು ನಿಂತಿದ್ದಾರೆ.
ಇದನ್ನೂ ಓದಿ: ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ… ಉತ್ತರ ಪ್ರದೇಶದಲ್ಲೊಂದು ಅಮಾನವೀಯ ಕೃತ್ಯ
ಕಮಲಾಕ್ಷಿ ಅವರ ಕತ್ತಿನವರೆಗೆ ನೀರು ಇದ್ದರೂ, ಇದೇ ಸ್ಥಿತಿಯಲ್ಲಿ ಅವರು ರಾತ್ರೀಯಿಡೀ ನೀರಿನಲ್ಲೇ ಜೀವ ಕಾಪಾಡಿಕೊಂಡು ನಿಂತಿದ್ದಾರೆ. ಎಲ್ಲಿಯವರೆಗೆ ಅಂದರೆ ನೀರಿನಲ್ಲೇ ಸಿಲುಕಿದ ಪರಿಣಾಮ ವೃದ್ಧೆ ಮಾತನಾಡಲು ಆಗದೇ ಯಾರ ಸಹಾಯವನ್ನು ಕೇಳದ ಸ್ಥಿತಿಯಲ್ಲಿ ಸಿಲುಕುತ್ತಾರೆ. ಮರದಿನ ಬೆಳಗ್ಗೆ (ಜು.14 ರಂದು) ಮರದ ಕೋಲನ್ನು ಹಿಡಿದುಕೊಂಡು ನದಿಯಲ್ಲಿದ್ದ ಬಂಡೆಯ ಮೇಲೆ ಆಶ್ರಯವನ್ನು ಪಡೆದಿದ್ದಾರೆ.
ಇದೇ ವೇಳೆ ಅಲ್ಲಿನ ಸ್ಥಳೀಯರು ಹಾಗೂ ನರಿಕ್ಕುಣಿ ಅಗ್ನಿಶಾಮಕ ರಕ್ಷಣಾ ತಂಡದವರು ಅವರನ್ನು ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ. ವೈದ್ಯಕೀಯ ತಪಾಸಣೆಗಾಗಿ ತಾಮರಸ್ಸೆರಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ಕಮಲಾಕ್ಷಿ ಅವರನ್ನು ದಾಖಲು ಮಾಡಿ, ಆ ಬಳಿಕ ಅವರನ್ನು ನಂತರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.