ತಿರುವನಂತಪುರಂ:54 ದಿನಗಳ ಎಳೆ ಹಸುಳೆಯನ್ನು ಪಾಪಿ ತಂದೆ ಎತ್ತಿ ಎಸೆದ ಪರಿಣಾಮ ಮಗು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಎರ್ನಾಕುಲಂನ ಅಂಗಾಮಲೈ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಈ ಘಟನೆ ಜೂನ್ 19ರಂದು ನಡೆದಿತ್ತು. ಪುಟ್ಟ ಹೆಣ್ಣು ಮಗುವಿನ ಮೇಲೆ ಹಲ್ಲೆ ನಡೆದ ನಂತರ ಅದನ್ನು ಖಾಸಗಿ ಆಸ್ಪತ್ರೆ ದಾಖಲಿಸಲಾಗಿದ್ದು, ಮಗುವನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಗುವಿನ ತಂದೆ ಶಿಂಜು ಥೋಮಸ್, ಆಕಸ್ಮಿಕವಾಗಿ ಮಗು ಮಂಚ(ಕಾಟ್)ದಿಂದ ಕೆಳಗೆ ಬಿದ್ದ ಪರಿಣಾಮ ಗಾಯಗೊಂಡಿರುವುದಾಗಿ ವೈದ್ಯರಲ್ಲಿ ತಿಳಿಸಿದ್ದ. ಆದರೆ ತಂದೆಯ ಹೇಳಿಕೆ ಮೇಲೆ ವೈದ್ಯರಿಗೆ ಅನುಮಾನ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬಳಿಕ ಥೋಮಸ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಮದ್ಯ ಕುಡಿದ ಅಮಲಿನಲ್ಲಿ ಮಗುವನ್ನು ಎತ್ತಿ ಎಸೆದ ಪರಿಣಾಮ ಅದು ಮಂಚಕ್ಕೆ ಹೋಗಿ ಬಡಿದಿತ್ತು ಎಂದು ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಮಗುವಿನ ತಾಯಿಯ ಹೇಳಿಕೆಯನ್ನು ಕೂಡಾ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೊಲೆ ಯತ್ನ ಸೇರಿದಂತೆ ಹಲವು ಆರೋಪದಡಿ ಥೋಮಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋರ್ಟ್ ಥೋಮಸ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.