Advertisement

ಕೆರಾಡಿ: ಮಳೆಗಾಲದಲ್ಲಿ ಹದಗೆಟ್ಟ ರಸ್ತೆ ದುರಸ್ತಿ ಇನ್ನೂ ಆಗಿಲ್ಲ !

10:32 PM May 13, 2019 | Team Udayavani |

ಕೆರಾಡಿ: ಕುಂದಾಪುರದಿಂದ ನೇರಳಕಟ್ಟೆ ಮೂಲಕವಾಗಿ ಕೆರಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಹಾಕಲಾಗಿದ್ದ ಡಾಮರು ಕಳೆದ ಮಳೆಗಾಲದಲ್ಲಿ ಕಿತ್ತು ಹೋಗಿದ್ದು, ಇನ್ನು ಇದರ ದುರಸ್ತಿ ಕಾರ್ಯ ನಡೆದಿಲ್ಲ. ಈ ಬಾರಿಯ ಮಳೆಗಾಲಕ್ಕೂ ಮುನ್ನ ಮರು ಡಾಮರೀಕರಣ ಆಗದಿದ್ದರೆ, ಈ ರಸ್ತೆ ಮತ್ತಷ್ಟು ಹದಗೆಡಲಿದೆ.

Advertisement

ಹಾಡಿಬಿರ್ಗಿ ಕ್ರಾಸ್‌ನಿಂದ ಕೆರಾಡಿಗೆ ಸುಮಾರು 366 ಮೀಟರ್‌ ಉದ್ದ ಹಾಗೂ 3.75 ಮೀಟರ್‌ ಅಗಲದ ಸಂಪರ್ಕ ರಸ್ತೆಗೆ ಕಳೆದ ವರ್ಷದ ಎಪ್ರಿಲ್‌ – ಮೇನಲ್ಲಿ ಡಾಮರೀಕರಣಗೊಂಡಿತ್ತು. ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಇದಕ್ಕೆ 10 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆದಿತ್ತು.

ಆದರೆ ಒಂದೇ ಮಳೆಗಾಲಕ್ಕೆ ಆ ರಸ್ತೆಯೆಲ್ಲ ಕಿತ್ತು ಹೋಗಿದೆ. ಈಗ ಕೆಲವೆಡೆ ಡಾಮರೇ ಕಾಣುತ್ತಿಲ್ಲ. ವಾಹನ ಸವಾರರಂತೂ ಈ ರಸ್ತೆಯಲ್ಲಿ ಸರ್ಕಸ್‌ ಮಾಡಿ ಸಂಚರಿಸಬೇಕಾದ ಸ್ಥಿತಿ ಇದೆ. ಅದರಲ್ಲೂ 50 ಮೀ. ರಸ್ತೆಗೆ ಡಾಮರು ಹಾಕಿದ ಜಾಗ ತುಂಬಾ ಜೇಡಿಮಣ್ಣಿನ ರಾಶಿಯಿದ್ದು, ಇಲ್ಲಿ ರಸ್ತೆಗೆ ಹಾಕಲಾದ ಡಾಮರೇ ಕಾಣಿಸುವುದಿಲ್ಲ. ಕಳೆದ ಮಳೆಗಾಲದಲ್ಲಿ ಇಲ್ಲಿನ ಜನ ಕೆರಾಡಿಯಂದ ಕುಂದಾಪುರ, ಆಜ್ರಿ, ನೇರಳಕಟ್ಟೆ, ಸಿದ್ದಾಪುರ ಕಡೆಗೆ ಸಂಚರಿಸಬೇಕಾದರೆ ಹರಸಾಹಸ ಪಡುವಂತಾಗಿತ್ತು.

ಸರಿಯಾದ ಚರಂಡಿಯಿಲ್ಲ
ಹಾಡಿಬಿರ್ಗಿ ಕ್ರಾಸ್‌ – ಕೆರಾಡಿ ರಸ್ತೆ ಕೇವಲ ಡಾಮರೀಕರಣಗೊಂಡ ಕೆಲವೇ ತಿಂಗಳಲ್ಲಿ ಹದಗೆಡಲು ಮುಖ್ಯ ಕಾರಣ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯಿರಲಿಲ್ಲ. 2-3 ಕಡೆಗಳಲ್ಲಿ ಮೋರಿ ಅಗತ್ಯ ವಿದ್ದರೂ, ಅಲ್ಲಿ ಮೋರಿ ನಿರ್ಮಿಸಲು ಮುಂದಾಗಿಲ್ಲ.

ಧೂಳುಮಯ ರಸ್ತೆ
ಈಗ ಡಾಮರೆಲ್ಲ ಕಿತ್ತು ಹೋಗಿ, ಬರೀ ಮಣ್ಣಿನ ರಸ್ತೆಯಾಗಿ ಮಾರ್ಪಡಾಗಿದೆ. ಈಗ ಇಲ್ಲಿ ವಾಹನಗಳು ಸಂಚರಿಸುವಾಗ ಧೂಳುಮಯವಾಗಿದ್ದು, ಇದರಿಂದ ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

Advertisement

25 ವರ್ಷಗಳ ಸಮಸ್ಯೆ
ಕೆರಾಡಿಯಿಂದ ಹಾಡಿಬರ್ಗಿವರೆಗೆ ಡಾಮರೀಕರಣಗೊಂಡ ರಸ್ತೆ ಕೇವಲ ಮೂರೇ ತಿಂಗಳಲ್ಲಿ ಡಾಮರು ಕಿತ್ತುಹೋಗಿದೆ. ಕಳೆದ ಮಳೆಗಾಲದಲ್ಲಿ ಹಾಳಾಗಿದ್ದರೂ ಇನ್ನೂ ಇದರ ದುರಸ್ತಿಗೆ ಮಾತ್ರ ಮುಂದಾಗಿಲ್ಲ. ಕಳೆದ 25 ವರ್ಷಗಳಿಂದಲೂ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಪ್ರತಿ ಸಲವೂ ಪಂಚಾಯತ್‌ನವರು ಒಂದಿಷ್ಟು ದುರಸ್ತಿ ಮಾಡುತ್ತಾರೆ. ಆದರೆ ಮಳೆಗಾಲದಲ್ಲಿ ಅದೆಲ್ಲ ಕೊಚ್ಚಿಕೊಂಡು ಹೋಗುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು, ಮರು ಡಾಮರೀಕರಣ ಮಾಡಲಿ.
-ರಾಘವೇಂದ್ರ, ಕೆರಾಡಿ

ದುರಸ್ತಿಗೆ ಪ್ರಯತ್ನ
ಸದ್ಯ ಯಾವುದೇ ಅನುದಾನ ಬಂದಿಲ್ಲ. ಯಾವುದಾದರೂ ಅನುದಾನ ಬಂದಲ್ಲಿ ಕೆರಾಡಿ ರಸ್ತೆಯ ದುರಸ್ತಿಗೆ ಬಳಸುವ ಬಗ್ಗೆ ಗಮನವಹಿಸಲಾಗುವುದು.
-ಶ್ರೀಧರ್‌ ಪಾಲೇಕರ್‌,
ಜ್ಯೂನಿಯರ್‌ ಎಂಜಿನಿಯರ್‌,
ಉಡುಪಿ ತಾ.ಪಂ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next