Advertisement

Kikkeri: ಭೂ ಕಬಳಿಕೆಗೆ ಸತ್ತ ವ್ಯಕ್ತಿಯನ್ನೇ ಜೀವಂತವಾಗಿರಿಸಿದರು

06:31 PM Feb 17, 2024 | Team Udayavani |

ಕಿಕ್ಕೇರಿ: ಮೃತ ವ್ಯಕ್ತಿಯ ಹೆಸರನ್ನು ಜೀವಂತವಾಗಿರುವ ವ್ಯಕ್ತಿಗಿಟ್ಟು ನಕಲಿ ಆಧಾರ್‌ ಕಾರ್ಡ್‌ಹಾಗೂ ಇತರ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಕಬಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಸುಮಾರು 34 ವರ್ಷಗಳ ಹಿಂದೆ (25-11-1990) ಕಿಕ್ಕೇರಿಯ ದೊಳ್ಳಶೆಟ್ಟಿ (ಹನುಮಂತಶೆಟ್ಟಿ) ಎಂಬ ವ್ಯಕ್ತಿ ಮೃತರಾಗಿದ್ದರು. ಇವರ ಹೆಸರಿನಲ್ಲಿ ಜಮೀನಿದ್ದು, ಈ ಜಮೀನು ಲಪಟಾಯಿಸಲು ಜೀವಂತ ಇರುವಂತೆ ದಾಖಲೆ ಸೃಷ್ಟಿಸಿ ನೋಂದಣಿ ಮೂಲಕ ಕ್ರಯ ಮಾಡಿಕೊಂಡಿರುವ ಪ್ರಕರಣ ನಡೆದಿದೆ. ಮೃತ ವ್ಯಕ್ತಿಯ ಮಗ ಕೆ.ಎಚ್‌.ಕೃಷ್ಣಮೂರ್ತಿ ಪೌತಿ ಖಾತೆ ಮಾಡಿಸಿಕೊಳ್ಳಲು ಈಚೆಗೆ ಕಂದಾಯ ಇಲಾಖೆಗೆ ಹೋದಾಗ ತಮ್ಮ ತಂದೆ ಹೆಸರಿನ ಆಸ್ತಿ ಬೇರೆ ವ್ಯಕ್ತಿ ಹೆಸರಿಗೆ ಕ್ರಯದ ಮೂಲಕ ವರ್ಗಾವಣೆ ಆಗಿರುವುದು ತಿಳಿದಿದೆ.

ಮೃತ ದೊಳ್ಳಶೆಟ್ಟಿ ಹೆಸರಿನಲ್ಲಿ ಹೋಬಳಿಯ ಜುಜ್ಜಲಕ್ಯಾತನಹಳ್ಳಿ ಗ್ರಾಮದ ಸರ್ವೆ ನಂ. 8/ಡಿ. 08.8ಗುಂಟೆ ಜಮೀನಿದೆ. ಈ ಆಸ್ತಿಯನ್ನು ಇದೇ ಜುಜ್ಜಲಕ್ಯಾತನಹಳ್ಳಿ ಗ್ರಾಮದ ಲೇಟ್‌ ಕೃಷ್ಣೇಗೌಡರ ಮಗ ರಂಗೇಗೌಡ 20-03-2023ರಂದು ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದ ನಂಜೇಗೌಡ ಎಂಬುವರನ್ನು ದೊಳ್ಳಶೆಟ್ಟಿ ಎಂದು ಬಿಂಬಿಸಿ, ಆಧಾರ್‌ಕಾರ್ಡ್‌ ನಮೂದಿಸಿ (ನಂ. 632744522581) ಇವರನ್ನೇ ಕೆ.ಆರ್‌.ಪೇಟೆಗೆ ಕರೆದುಕೊಂಡು ಹೋಗಿ ಶುದ್ಧಕ್ರಯವನ್ನು ಕೆ.ಆರ್‌.ಪೇಟೆ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಮಾಡಿಸಿಕೊಳ್ಳಲಾಗಿದೆ.

ಅಸಲಿಗೆ ಬರೆದುಕೊಟ್ಟ ವ್ಯಕ್ತಿಯ ಬಳಿ ಇರುವ ಆಧಾರ್‌ ಕಾರ್ಡ್‌ಗೂ, ಆರ್‌.ಟಿ.ಸಿ.ಯಲ್ಲಿರುವ ದೊಳ್ಳಶೆಟ್ಟಿಗೂ ಯಾವುದೇ ತಾಳೆ ಇಲ್ಲ. ದೊಳ್ಳಶೆಟ್ಟಿ ಮೃತನಾಗಿ 34 ವರ್ಷಗಳಾಗಿವೆ. ಅಕ್ರಮದಲ್ಲಿ ತಾಲೂಕು ಉಪನೋಂದಣಾಧಿಕಾರಿಗಳು, ದಸ್ತಾವೇಜು ಬರಹಗಾರರು, ಸರ್ವೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ಸುಳ್ಳು ದಾಖಲೆ ಸೃಷ್ಟಿಸಿ ಮೃತ ವ್ಯಕ್ತಿ ಕುಟುಂಬಕ್ಕೆ ಸೇರಬೇಕಾದ ಸ್ವತ್ತನ್ನು ಬೇರೊಬ್ಬರಿಗೆ ಕ್ರಯಪತ್ರ ಮಾಡಿಕೊಡಲು ಸಹಕರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮೃತ ದೊಳ್ಳಶೆಟ್ಟಿ ಮಗನಾದ ಕೆ.ಎಚ್‌.ಕೃಷ್ಣಮೂರ್ತಿ ಡೀಸಿ, ಎಸ್ಪಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next