Advertisement
ಕಿಯೋನಿಕ್ಸ್‌ಗೆ ನೀಡಿದ್ದ 4(ಜಿ) ವಿನಾಯಿತಿಯನ್ನು ರದ್ದುಗೊಳಿಸುವಂತೆ ಸಂಸ್ಥೆಯ ಉನ್ನತಾಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ನ. 22ರಂದೇ ಆದೇಶ ಪ್ರಕಟವಾಗಿದೆ. ಈ ಕುರಿತು ವಿಶೇಷ ರಾಜ್ಯಪತ್ರ ಪ್ರಕಟಿಸುವಂತೆ ರಾಜ್ಯಪತ್ರ ಇಲಾಖೆ ಜಂಟಿ ನಿರ್ದೇಶಕರಿಗೆ ಆದೇಶದ ಮುದ್ರಿತ ಪ್ರತಿಯನ್ನು ರವಾನಿಸಲಾಗಿದೆ. ಮಹಾಲೇಖಪಾಲರು, ಐಟಿಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಕಳುಹಿಸಲಾಗಿದೆ.
ಈ ಆದೇಶ ಪ್ರಕಟವಾಗುತ್ತಿದ್ದಂತೆ ಕಿಯೋನಿಕ್ಸ್‌ಗೆ ಬೀಗಮುದ್ರೆ ಹಾಕಲಾಗುತ್ತದೆ ಎಂಬ ಮಾತುಗಳು ವೆಂಡರ್ಗಳು, ಉಪಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮಧ್ಯೆ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಹಗರಣದ ಮೂಲ ಹುಡುಕುವಲ್ಲಿ ವಿಫಲವಾಗಿರುವ ಸರಕಾರ ಹತಾಶ ಪ್ರಯತ್ನವಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಆದರೆ ಸರಕಾರದ ಮೂಲಗಳ ಪ್ರಕಾರ ಕಿಯೋನಿಕ್ಸ್‌ಗೆ ಬೀಗ ಜಡಿಯುವ ಯಾವುದೇ ಪ್ರಸ್ತಾವ ಇಲ್ಲ. ಯಾಕೆಂದರೆ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಹೆಚ್ಚಿನ ಸಾಫ್ಟ್ವೇರ್ ಸಂಬಂಧಿ ಸೇವೆಗಳು, ಮಾನವ ಸಂಪನ್ಮೂಲ, ಖರೀದಿ, ನೇಮಕಗಳು ಕಿಯೋನಿಕ್ಸ್ ಮೂಲಕವೇ ನಡೆದಿದೆ. ಸಂಸ್ಥೆಗೆ ಬೀಗ ಮುದ್ರೆ ಹಾಕಿದರೆ ಇದೆಲ್ಲದಕ್ಕೂ ಸಮಸ್ಯೆಯಾಗುತ್ತದೆ. ಹೀಗಾಗಿ 4ಜಿ ವಿನಾಯಿತಿ ರದ್ದುಪಡಿಸುವುದಕ್ಕೆ ಮಾತ್ರ ನಿರ್ಧರಿಸಲಾಗಿದೆ. ಇದರಿಂದ ಕಿಯೋನಿಕ್ಸ್ ಮೂಲಕ ನಡೆಸುವ ಎಲ್ಲ ವ್ಯವಹಾರಗಳಿಗೂ ಟೆಂಡರ್ ಆಹ್ವಾನಿಸುವುದು ಅನಿವಾರ್ಯವಾಗಲಿದೆ. ಇದರಿಂದ ಅವೈಜ್ಞಾನಿಕ ದರ ನಿಗದಿಗೆ ಕಡಿವಾಣ ಹಾಕಲು ಸಾಧ್ಯ ಎಂಬುದು ಸರಕಾರದ ಲೆಕ್ಕಾಚಾರವಾಗಿದೆ.
Related Articles
ಇನ್ನೊಂದು ಮೂಲದ ಪ್ರಕಾರ 4(ಜಿ) ವಿನಾಯಿತಿಯನ್ನು ತಡೆಹಿಡಿಯಲಾಗಿದೆಯೇ ಹೊರತು ರದ್ದು ಮಾಡಿಲ್ಲ ಎಂದು ಉಲ್ಲೇಖೀಸಿಲ್ಲ. ಹೀಗಾಗಿ ಕೆಲವು ದಿನಗಳ ಮಟ್ಟಿಗೆ ಮಾತ್ರ ಇದು ಮುಂದುವರಿಯಬಹುದು. ಹಳೆ ಪ್ರಕರಣದ ತನಿಖೆ ಮುಗಿದ ಬಳಿಕ ಹೊಸ ಆದೇಶ ಹೊರಡಿಸಬಹುದು ಎನ್ನಲಾಗುತ್ತಿದೆ. ಆದರೆ ಕೆಲವು ಪ್ರಕರಣಗಳಲ್ಲಿ 200ರಿಂದ 400 ಪಟ್ಟು ದರ ನಿಗದಿ ಮಾಡಿದ ಹಗರಣ ಪಾತಾಳ ಗರಡಿಯಂತಾಗಿದ್ದು, ಆರೋಪಿಗಳ ಪತ್ತೆ ಸವಾಲಾಗಿದೆ.
Advertisement
40 ಪರ್ಸೆಂಟ್ ತನಿಖಾ ವ್ಯಾಪ್ತಿಗೆ: ಖರ್ಗೆಕಿಯೋನಿಕ್ಸ್ ಅವ್ಯವಹಾರವನ್ನು 40 ಪರ್ಸೆಂಟ್ ಕಮಿಷನ್ ಹಗರಣದ ತನಿಖೆ ನಡೆಸುತ್ತಿರುವ ನ್ಯಾ| ನಾಗಮೋಹನ್ ದಾಸ್ ಸಮಿತಿ ವ್ಯಾಪ್ತಿಗೆ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. 4(ಜಿ) ರದ್ದತಿಯನ್ನು ದೃಢಪಡಿಸಿರುವ ಅವರು, ಕಿಯೋನಿಕ್ಸ್ ಸಂಸ್ಥೆಯನ್ನು ಮುಚ್ಚುವ ಪ್ರಸ್ತಾವ ಸರಕಾರದ ಮುಂದಿಲ್ಲ. ಆದರೆ ಪಾರದರ್ಶಕ ಕಾಯ್ದೆ ಅನ್ವಯ ನೀಡಿದ್ದ ವಿನಾಯಿತಿ ರದ್ದುಪಡಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಕೆಲವು ವಾರಗಳು ಅಥವಾ ತಿಂಗಳು ಮಟ್ಟಿಗೆ ಇದು ಮುಂದುವರಿಯಬಹುದು. ವ್ಯವಸ್ಥೆಯನ್ನು ಹಳಿಗೆ ತರಬೇಕಿದ್ದರೆ ಇದು ಅನಿವಾರ್ಯ. ಕಿಯೋನಿಕ್ಸ್ ಸಿಬಂದಿ, ಅಧಿಕಾರಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕಿಯೋನಿಕ್ಸ್ ಹಗರಣದಲ್ಲಿ ನನ್ನ ಪಾತ್ರವಿದೆ ಎಂದು ಬಿಜೆಪಿಯವರು ಕಪೋಲಕಲ್ಪಿತ ಆರೋಪ ಮಾಡಿದ್ದರು. ನನ್ನ ರಾಜೀನಾಮೆಗೂ ಆಗ್ರಹಿಸಿದ್ದರು. ಸತ್ಯ ಬಹಿರಂಗವಾದ ಬಳಿಕ ಸುಮ್ಮನಾಗಿದ್ದಾರೆ ಎಂದು ಅವರು “ಉದಯವಾಣಿ’ಗೆ ತಿಳಿಸಿದರು. -ರಾಘವೇಂದ್ರ ಭಟ್