Advertisement
1952ರಿಂದ 56ರ ವರೆಗೆ ರಾಜ್ಯದ ಎರಡನೆಯ ಮುಖ್ಯಮಂತ್ರಿಗಳಾಗಿದ್ದರು. ಅವರ ಅವಧಿಯಲ್ಲಿ ಅವರ ಆಸಕ್ತಿಯಿಂದಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಆಗಿನ ಹೆಸರು ಸಂಸ್ಕೃತಿ ಅಭಿವೃದ್ಧಿ ಇಲಾಖೆ) ಜನ್ಮತಾಳಿತ್ತು. ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುವ ಒಂದು ತಿಂಗಳು ಹಿಂದೆ ಇಲಾಖೆ ನಿರ್ದೇಶಕರಾಗಿದ್ದ ಹಿರಿಯ ಸಾಹಿತಿ ಎ.ಎನ್.ಮೂರ್ತಿರಾಯರನ್ನು ಇಲಾಖಾ ಸಂಬಂಧ ಭೇಟಿಯಾಗಲು ಹೇಳಿದ್ದರು. ಮೂರ್ತಿರಾಯರು ಹೋದಾಗ ಹನುಮಂತಯ್ಯನವರು ಎಲ್ಲಿಗೋ ಆತುರಾತುರದಲ್ಲಿ ಹೊರಡಲು ಸಿದ್ಧರಾಗಿದ್ದರು.
Related Articles
Advertisement
ಇಳಿವಯಸ್ಸಿನಲ್ಲೂ ಹುರುಪುಹನುಮಂತಯ್ಯನವರು ಭೇಟಿಯಾದ ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯನವರಿಗೆ 95 ವರ್ಷ. ಈ ಹೊತ್ತಿನಲ್ಲಿಯೂ ಇದ್ದ ಕರ್ತವ್ಯಪ್ರಜ್ಞೆ ಬೆರಗುಗೊಳಿಸುತ್ತದೆ. “ನೀವು ಸರಕಾರದ ಕೆಲಸಕ್ಕೆ ಬರುವುದು. ನೀವು ಸರಕಾರದ ಪ್ರತಿನಿಧಿ. ನಾನೇ ನಿಮ್ಮ ಕಚೇರಿಗೆ ಬರುತ್ತೇನೆ’ ಎಂದು 95ರ ಇಳಿವಯಸ್ಸಿನಲ್ಲಿ ಹೇಳಿದ್ದು, “ಅಂತಹವರು ನಮ್ಮಲ್ಲಿಗೆ ಬರುವುದು ನಮಗೆ ಶ್ರೇಯಸ್ಕರವಲ್ಲ. ಸ್ವಲ್ಪ ಹೊತ್ತು ಬಿಟ್ಟರೆ ಅವರೇ ಬರುತ್ತಾರೆ’ ಎಂದು ತಿಳಿದು ತುರ್ತಾಗಿ ಅವರ ಮನೆಗೇ ಹನುಮಂತಯ್ಯನವರು ಹೋದದ್ದು ಉಭಯ ವ್ಯಕ್ತಿಗಳಲ್ಲಿರುವ ಮೇರುತನಕ್ಕೆ ಸಾಕ್ಷಿ. ಅಧಿಕಾರವಿಲ್ಲದ ಹಿರಿಯರು ಅಧಿಕಾರಸ್ಥರ ಕಚೇರಿಗೆ ಹೋಗುವುದು ಸಾಮಾನ್ಯ, ಆದರೆ ಇದರಲ್ಲಿ ಪ್ರಜಾಹಿತ, ಸಮಾಜಹಿತ ಅಡಗಿರುವುದು ಅಪರೂಪ, ಸ್ವಹಿತವೇ ಮುಖ್ಯ. ಅದೇ ರೀತಿ ನಾಡಿಗೆ ಸೇವೆ ಸಲ್ಲಿಸಿದ ಹಿರಿಯರ ಮನೆಗೆ ಸಚಿವರು, ಮುಖ್ಯಮಂತ್ರಿಗಳು ಹೋಗುವುದೂ ಅಪರೂಪವೇ. ಹೋದರೂ ಅಲ್ಲೇನಾದರೂ ರಾಜಕೀಯ ಲಾಭದ ಉದ್ದೇಶವಿರುತ್ತದೆ. ಇಲ್ಲಿ ಹನುಮಂತಯ್ಯನವರು ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುವ ಸ್ಥಿತಿಯಲ್ಲಿ ವಿಶ್ವೇಶ್ವರಯ್ಯನವರ ಮನೆಗೆ ಹೋದದ್ದು. ಅಂತಹ ಹೊತ್ತಿನಲ್ಲಿ ರಾಜ್ಯದ ಹಿತದ ಗಮನ ಸಾಮಾನ್ಯ ರಾಜಕಾರಣಿಗಳಿಗೆ ಬರುವುದು ಬಲು ದುರ್ಲಭವೆಂದು ಕಾಣಿಸುತ್ತದೆ. ರಾಜಕೀಯ ಶುದ್ಧತೆ: ವಿಶ್ವೇಶ್ವರಯ್ಯನವರಾದರೂ ಹಳೆಯ ತಲೆಮಾರಿನವರೆಂದು ಹೇಳಿ ಸಮಾಧಾನ ಪಟ್ಟುಕೊಳ್ಳಬಹುದು. ಹನುಮಂತಯ್ಯ ಅವರ ತಲೆಮಾರಿನ ಅನಂತರದವರು. ಆಗ ರಾಜಕೀಯ ಕ್ಷೇತ್ರ ಈಗಿನಷ್ಟು ಕುಲಗೆಟ್ಟಿಲ್ಲ ಎನ್ನುವುದನ್ನು ಘಟನೆ ಶ್ರುತಪಡಿಸುತ್ತದೆ.
ಅಧಿಕಾರಕ್ಕಿಂತ ಸಂಸ್ಕೃತಿ ಮುಖ್ಯ ಅಧಿಕಾರ ಕಳೆದುಕೊಳ್ಳುವ ಹೊತ್ತಿಗೂ ಸಂಸ್ಕೃತಿ ಇಲಾಖೆಯನ್ನು ಪುನರುಜ್ಜೀವಗೊಳಿಸಲು ಅವರು ವಹಿಸಿದ ಆಸಕ್ತಿ ಮಾತ್ರ ನಿಷ್ಕಾಮಸೇವೆಗೆ ಉದಾಹರಣೆ. ಅವರೂ ಸಂಸ್ಕೃತಿ ಅಭಿವೃದ್ಧಿ ಇಲಾಖೆ ಆರಂಭಿಸಿದಾಗ ಟೀಕೆಗಳನ್ನು ಎದುರಿಸಿದ್ದರು. “ಸಂಸ್ಕೃತಿ ಎನ್ನುವುದು ವ್ಯಕ್ತಿಯ ಹೃದಯದಲ್ಲಿ ಉದ್ಭವಿಸಿ ಹೊರಹೊಮ್ಮಬೇಕು. ಸರಕಾರ ಇಲಾಖೆ ಮಾಡಿದರೆ ಬರುತ್ತದೆಯೋ?’, “ಸಂಸ್ಕೃತಿ, ಸಾಹಿತ್ಯಗಳ ಬೆಳವಣಿಗೆ ಸಮಾಜದಿಂದ ಬರಬೇಕು. ಸರಕಾರ ಇದಕ್ಕೆ ಕೈಹಾಕಬಾರದು’, “ಈ ಸಂಸ್ಕೃತಿ ಗಿಂಸ್ಕೃತಿ ಯಾರಿಗೆ ಬೇಕು? ಹೊಟ್ಟೆಪಾಡು ನೋಡಿಕೊಂಡರೆ ಸಾಕು’, “ಪಕ್ಷದಲ್ಲಿ (ಕಾಂಗ್ರೆಸ್‌ನಲ್ಲಿ) ಯಾರಿಗೂ ಬೇಕಿಲ್ಲದ್ದು ಇದು. ಇದು ರಾಜಕೀಯ ಸ್ಟಂಟ್’ ಹೀಗೆ ಅನೇಕಾನೇಕ ವ್ಯಂಗ್ಯ, ಟೀಕೆಗಳು ಬಂದಿದ್ದವು. ಗಿಡದಲ್ಲಿ ಅಂತಃಸತ್ವವಿದ್ದರೂ ಬಿಸಿಲು, ನೀರು ಇಲ್ಲದಿದ್ದರೆ ಗಿಡ ಬೆಳೆಯುವುದು ಸಾಧ್ಯವೆ? ಹನುಮಂತಯ್ಯನವರದೂ ಇದೇ ಭಾವನೆಯಾಗಿತ್ತು. ಎಲ್ಲರ ಕೈಗೆ ಎಟಕಬಹುದಾದ ಪುಸ್ತಕಗಳನ್ನು ಮುದ್ರಿಸಲು ಸಂಸ್ಕೃತಿ ಇಲಾಖೆ ನಿರ್ಧರಿಸಿತ್ತು. ಸಮಿತಿಯವರು ಗದುಗಿನ ಭಾರತಕ್ಕೆ 6 ರೂ. ಬೆಲೆ ನಿಗದಿ ಪಡಿಸಬಹುದೆಂದೂ 20,000 ಪ್ರತಿ ಮುದ್ರಿಸಬಹುದು ಎಂದೂ ಸೂಚಿಸಿತ್ತು. ಹನುಮಂತಯ್ಯನವರು “ಎರಡೇ ರೂ. ಬೆಲೆ ಇರಲಿ, 40,000 ಪ್ರತಿಗಳನ್ನು ಅಚ್ಚು ಹಾಕಿಸಿ’ ಎಂದು ಆದೇಶಿಸಿದರು. ಜೈಮಿನಿ ಭಾರತಕ್ಕೆ ಒಂದು ರೂ. ನಿಗದಿ ಪಡಿಸಲಾಯಿತು. ಇವು ಕಾಳಸಂತೆ ಮಾರಾಟಗಾರರ ಕೈಗೆ ಹೋಗದಂತೆ ಎಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಜನ ಓಡೋಡಿ ಬಂದು ಕೊಂಡುಕೊಂಡರು. “ಇಲಾಖೆ ಇನ್ನೇನು ಕೆಲಸವನ್ನು ಮಾಡದೆ ಇದೊಂದನ್ನು ಮಾತ್ರ ಮಾಡಿದರೂ ಅದರ ಜನ್ಮ ಸಾರ್ಥಕವಾಯಿತೆನ್ನಬಹುದು. ಇದರ ಕೀರ್ತಿ ಹನುಮಂತಯ್ಯನವರಿಗೆ ಸಲ್ಲತಕ್ಕದ್ದೆಂದು ಅವರ ವಿರೋಧಿಗಳೂ ಒಪ್ಪುತ್ತಾರೆ’ ಎಂದು ಮೂರ್ತಿರಾಯರು ಹೇಳಿದ್ದಾರೆ. ಪ್ರಾಯಃ ಇಂತಹ ಸಂಸ್ಕೃತಿಯ ಅಂತಃಸತ್ವವಿದ್ದ ಕಾರಣವೇ ವಿಶ್ವೇಶ್ವರಯ್ಯ ಅವರ ಮನೆಗೆ ಅವರು ದೌಡಾಯಿಸಿದರೆನ್ನಬಹುದು ಈಗಲೂ ಮುಂದೆಯೂ ರಾಜಕೀಯ ಪ್ರಪಂಚದಲ್ಲಿ ಹನುಮಂತಯ್ಯನವರ ಕಾರ್ಯ ಶ್ರದ್ಧೆ ಕಿಂಚಿತ್ತಾದರೂ ಮೂಡಲಿ ಎಂದು ಅವರ ಪುಣ್ಯತಿಥಿ ಸಂದರ್ಭ (14.2.1908-1.12.1980) ಸಾಮೂಹಿಕ ವಾಗಿ ಪ್ರಾರ್ಥಿಸಬೇಕಾಗಿದೆ. -ಮಟಪಾಡಿ ಕುಮಾರಸ್ವಾಮಿ