ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ “3ಡಿ ತಂತ್ರಜ್ಞಾನ’ ಆಧಾರಿತ ನಾಡಪ್ರಭು ಕೆಂಪೇಗೌಡರ ಸಂಗ್ರಹಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದೆ. ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಐದು ಎಕರೆ ಜಮೀನು ನೀಡುವಂತೆ ನಾಗರಿಕ ವಿಮಾನಯಾನ ಇಲಾಖೆಗೆ ಕೋರಿಕೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, ವಿಮಾನ ನಿಲ್ದಾಣಕ್ಕೆ ಬರುವ ಪ್ರವಾಸಿಗರಿಗೆ ನಾಡಪ್ರಭು ಕೆಂಪೇಗೌಡರ ಇತಿಹಾಸ ಮತ್ತು ಬೆಂಗಳೂರು ಅಭಿವೃದ್ಧಿಯ ಹಾದಿ ಕುರಿತು ಸಮಗ್ರ ಮಾಹಿತಿ ನೀಡಲು 3 ಡಿ ತಂತ್ರಜ್ಞಾನ ಆಧಾರಿತ ಸಂಗ್ರಹಾಲಯ ಸ್ಥಾಪಿಸಲಾಗುವುದು ಎಂದು ಹೇಳಿದರು.
ಕೆಂಪೇಗೌಡರ ಕಾಲದ ಅಳ್ವಿಕೆ ಹಾಗೂ ಸಾಧನೆಗಳ ಕುರಿತ ಸಾಕ್ಷ್ಯಾಚಿತ್ರ ಹಾಗೂ ದಾಖಲೀಕರಣಕ್ಕಾಗಿ ಇತಿಹಾಸ ತಜ್ಞರು ಸೇರಿ ವಿವಿಧ ಕ್ಷೇತ್ರದ ಗಣ್ಯರ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೆಂಪೇಗೌಡರ ಹುಟ್ಟು ಸ್ಥಳ, ರಾಜ್ಯಭಾರ, ಅಭಿವೃದ್ಧಿ ಮತ್ತಿತರ ವಿಷಯಗಳನ್ನು ಆಧರಿಸಿ ಬೆಂಗಳೂರು ಸುವರ್ಣ ದಾರಿ ಕಾರಿಡಾರ್ ಯೋಜನೆ ಸಹ ರೂಪಿಸಲಾಗುವುದು ಎಂದು ತಿಳಿಸಿದರು. ಮೆಯೋ ಹಾಲ್‌ನಲ್ಲಿರುವ ಕೆಂಪೇಗೌಡರ ಸಂಗ್ರಹಾಲಯದ ಮೇಲ್ದರ್ಜೆಗೆ ಏರಿಸಿ ಮತ್ತಷ್ಟು ಮಾಹಿತಿ ಹಾಗೂ ಕೆಂಪೇಗೌಡರ ವಂಶಸ್ಥರಿಗೆ ಸೇರಿ ಅಮೂಲ್ಯ ವಸ್ತುಗಳ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು.
ಪ್ರಾಧಿಕಾರದ ಕಚೇರಿ ಮೆಯೋಹಾಲ್‌ನಲ್ಲಿ ಆರಂಭಿಸಲು ಮೂರು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧರಿಸಲಾಯಿತು. ರಾಮನಗರ ಜಿಲ್ಲೆಯಲ್ಲಿ ಕೆಂಪೇಗೌಡರಿಗೆ ಸಂಬಂಧಿಸಿದ ಸ್ಥಳ ಪತ್ತೆ ಹಚ್ಚುವುದು ಹಾಗೂ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಎರಡು ಸಮಿತಿ ರಚಿಸಲು ಹಾಗೂ ಕೆಂಪಾಪುರ ಸುತ್ತಲ ಐದು ಎಕರೆ ಜಾಗ ರೈತರಿಂದ ಸ್ವಾಧೀನಪಡಿಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.