ನಿರ್ದೇಶಕ ಗುರು ದೇಶಪಾಂಡೆ ಅವರಿಗೆ ಕಾಮಿಡಿ ನಟ ಚಿಕ್ಕಣ್ಣ ಅವರನ್ನು ವಿಭಿನ್ನವಾಗಿ ತೋರಿಸಬೇಕೆಂಬ ಆಸೆ ಇತ್ತಂತೆ. ಆಗ ಅವರ ತಲೆಗೆ ಬಂದ ಆಲೋಚನೆ ಕೆಂಪೇಗೌಡ ಮೀಸೆ ಬಿಡಿಸಿ, ರಾಜಾಹುಲಿ ಎಂಬ ಹೆಸರಿನ ಪೊಲೀಸ್ ಆಫೀಸರ್ ಪಾತ್ರದ ಕಲ್ಪನೆ. ಆ ಕಲ್ಪನೆಯಂತೆ ಈಗ ಚಿಕ್ಕಣ್ಣ ರಾಜಾಹುಲಿಯಾಗಿ “ಸಂಹಾರ’ದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚಿಕ್ಕಣ್ಣ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಆ್ಯಕ್ಷನ್ ದೃಶ್ಯಗಳಿರುವ ಟ್ರೇಲರ್‌ವೊಂದನ್ನು ಗಿಫ್ಟ್ ಆಗಿ ರಿಲೀಸ್ ಮಾಡಿದೆ ಚಿತ್ರತಂಡ.
ಈ ಪಾತ್ರಕ್ಕಾಗಿ ಚಿಕ್ಕಣ್ಣ ಉದ್ದ ಮೀಸೆ ಬಿಡಬೇಕಿತ್ತಂತೆ. ಸುಮಾರು 20 ದಿನಗಳ ಕಾಲ ಕಂಟಿನ್ಯೂಟಿ ಕಾಯ್ದುಕೊಳ್ಳಬೇಕಿತ್ತಂತೆ. ಅದನ್ನು ಚಿಕ್ಕಣ್ಣ ಪ್ರೀತಿಯಿಂದ ಮಾಡಿದ್ದಾರೆಂಬುದು ನಿರ್ದೇಶಕ ಗುರುದೇಶಪಾಂಡೆ ಮಾತು. “ಚಿಕ್ಕಣ್ಣ ತುಂಬಾ ಬಿಝಿ ನಟ ಎಂಬುದು ಎಲ್ಲರಿಗೂ ಗೊತ್ತು. ಈ ಬಿಝಿಯ ನಡುವೆಯೂ ನಮಗಾಗಿ 20 ದಿನ ಡೇಟ್ಸ್ ಕೊಟ್ಟರು. ಮಧ್ಯೆ ಶೂಟಿಂಗ್ ಬ್ರೇಕ್ ಇದ್ದಾಗಲೂ ಕಂಟಿನ್ಯೂಟಿಗಾಗಿ ಬೇರೆ ಯಾವುದೇ ಸಿನಿಮಾಗಳಲ್ಲೂ ನಟಿಸಲಿಲ್ಲ’ ಎಂದು ಚಿಕ್ಕಣ್ಣ ಅವರ ಬಗ್ಗೆ ಮಾತನಾಡುತ್ತಾರೆ ಗುರು ದೇಶಪಾಂಡೆ.
ಚಿತ್ರದಲ್ಲಿ ಚಿಕ್ಕಣ್ಣ ಸೀರಿಯಸ್ ಆಗಿ ತನಿಖೆ ನಡೆಸುತ್ತಿದ್ದರೆ, ಪ್ರೇಕ್ಷಕರಿಗೆ ಅದು ನಗುಬರುತ್ತದೆಯಂತೆ. ಆ ತರಹದ ಒಂದು ಪಾತ್ರವನ್ನು ಸೃಷ್ಟಿಸಿದ್ದಾರಂತೆ ಗುರು ದೇಶಪಾಂಡೆ. ಇನ್ನು, ತಾನೊಬ್ಬ ನಾಯಕನಾಗಿಯೂ ತನ್ನ ಜೊತೆಗೆ ನಟಿಸುವ ಸಹಕಲಾವಿದರನ್ನು ಬೆಂಬಲಿಸುವ ಚಿರಂಜೀವಿ ಸರ್ಜಾ ಅವರಿಗೆ ಥ್ಯಾಂಕ್ಸ್ ಹೇಳಲು ಗುರು ದೇಶಪಾಂಡೆ ಮರೆಯಲಿಲ್ಲ. ನಾಯಕ ಚಿರಂಜೀವಿ ಸರ್ಜಾ ಅವರಿಗೆ ಅವರ ಕೆರಿಯರ್‌ನಲ್ಲಿ ಇದು ಒಂದು ಒಳ್ಳೆಯ ಕಮರ್ಷಿಯಲ್ ಸಿನಿಮಾ ಆಗುವ ವಿಶ್ವಾಸವಿದೆಯಂತೆ.
ಇನ್ನು, ಚಿತ್ರದ ನಾಯಕಿ ಕಾವ್ಯಾ ಶೆಟ್ಟಿಯವರೊಂದಿಗೆ ಹೆಚ್ಚಿನ ಭಾಗದ ಚಿತ್ರೀಕರಣವಿದ್ದು, ಅವರಿಂದ ಕಾರು ಹಾಗೂ ಬೈಕ್ ಓಡಿಸುವುದನ್ನು ಕಲಿತೆ ಎನ್ನುತ್ತಾ ನಕ್ಕರು ಚಿರು. ಇನ್ನು, ಚಿಕ್ಕಣ್ಣ ಅವರಿಂದ ಕಾಮಿಡಿ ಟೈಮಿಂಗ್ ಕಲಿತುಕೊಂಡಿದ್ದಾಗಿ ಹೇಳಲು ಚಿರು ಮರೆಯಲಿಲ್ಲ. ನಾಯಕಿ ಕಾವ್ಯಾ ಶೆಟ್ಟಿ 15 ದಿನಗಳ ಕಾಲ ಮಂಗಳೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಒಳ್ಳೆಯ ಅನುಭವ ಕೊಟ್ಟಿದೆಯಂತೆ. ತನ್ನ ಹುಟ್ಟುಹಬ್ಬಕ್ಕೆ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿರುವುದರಿಂದ ಸಹಜವಾಗಿಯೇ ಚಿಕ್ಕಣ್ಣ ಖುಷಿಯಾಗಿದ್ದರು.
“ನಾನು ಮುಂದೆ ಎಷ್ಟೇ ಹುಟ್ಟುಹಬ್ಬ ಆಚರಿಸಿದರೂ ನನ್ನ 30ನೇ ವರ್ಷದ ಹುಟ್ಟುಹಬ್ಬಕ್ಕೆ ಚಿತ್ರತಂಡ ಕೊಟ್ಟ ಗಿಫ್ಟ್ ಅನ್ನು ಮರೆಯುವಂತಿಲ್ಲ. ನನಗೆ ಇವೆಲ್ಲವೂ ಹೊಸ ಅನುಭವ. ನಾನು ಯಾವತ್ತು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ’ ಎಂದರು. ತಬಲಾ ನಾಣಿ ನಾಯಕನ ತಂದೆಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಸೀರಿಯಸ್ ಪಾತ್ರ ಸಿಕ್ಕಿದ್ದರಿಂದ ಹೇಗೆ ನಿಭಾಹಿಸೋದು ಎಂಬ ಸಣ್ಣ ಟೆನನ್ ಅವರಿಗಿತ್ತಂತೆ. ಆದರೆ ಅರ್ಧ ದಿನ ಚಿತ್ರೀಕರಣದ ನಂತರ ಹೊಂದಿಕೊಂಡೆ ಎಂಬುದು ಅವರ ಮಾತು.
ಚಿತ್ರದ ನಿರ್ಮಾಪಕ ವೆಂಕಟೇಶ್ ಅವರು ನಿರ್ದೇಶಕರ ಜೊತೆ ಸಿನಿಮಾ ವಿಷಯಕ್ಕಾಗಿ ಸಣ್ಣಪುಟ್ಟ ಜಗಳವಾಡುತ್ತಾ ಇರುತ್ತಾರಂತೆ. ಅದು ಸಿನಿಮಾ ಚೆನ್ನಾಗಿ ಬರಬೇಕೆಂಬ ಉದ್ದೇಶದಿಂದ ಬಿಟ್ಟರೆ ಬೇರೆ ಯಾವ ಕಾರಣಕ್ಕೂ ಅಲ್ಲ ಎಂಬುದು ಅವರ ಮಾತು. ಇದೇ ವೇಳೆ ಬೆಳಗ್ಗೆ 7ರಿಂದ ರಾತ್ರಿ 3 ರವರೆಗೆ ಚಿತ್ರೀಕರಣದಲ್ಲಿ ಭಾಗವಹಿಸಿದ ಹರಿಪ್ರಿಯಾ ಅವರ ಸಿನಿಮಾ ಪ್ರೀತಿಯನ್ನು ಕೊಂಡಾಡಿದರು ವೆಂಕಟೇಶ್.
* ರವಿಪ್ರಕಾಶ್ ರೈ