ಬೆಂಗಳೂರು: ಸಿದ್ಧರಾಮಯ್ಯ ಮುಖ್ಯಮಂತ್ರಿ (Chief Minister)ಯಾಗಿ ಸಾಕಷ್ಟು ಅನುಭವ ಪಡೆದಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿಲ್ಲ. ಆದ್ದರಿಂದ ದಯವಿಟ್ಟು ಇನ್ನು ಮುಂದೆ ಅಧಿಕಾರ ಬಿಟ್ಟುಕೊಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ ೫೧೫ನೇ ಜಯಂತಿಯ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲೇ ಮಾತನಾಡಿ “ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದ್ರೆ ಸಾಧ್ಯ, ಇಲ್ಲದಿದ್ದರೆ ಅದು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಿದ್ದರಾಮಯ್ಯನವರಿಗೆ ನಮಸ್ಕಾರ ಮಾಡುತ್ತ ನೀವು ದಯವಿಟ್ಟು ಡಿ.ಕೆ.ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡಿ ನಿಮಗೆ ಒಳ್ಳೆಯದಾಗುತ್ತೇ” ಎಂದರು.
ಬಳಿಕ ಮಾಧ್ಯಮ ಜೊತೆ ಮಾತನಾಡಿದ ಚಂದ್ರಶೇಖರ ಸ್ವಾಮೀಜಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಪಕ್ಷ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಓಡಾಡಿ, ಹಣ ಖರ್ಚು ಮಾಡಿದ್ದಾರೆ. ಸಿದ್ದರಾಮಯ್ಯ ಏನೂ ಮಾಡದೇ ಅನಾಯಸವಾಗಿ ಮುಖ್ಯಮಂತ್ರಿ ಆಗಿದ್ದಾರೆ ಎಂದು ಹೇಳಿದರು.
ಹೈ ಕಮಾಂಡ್ ತೀರ್ಮಾನ ಅಂತಿಮ:
ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿ ತೀರ್ಮಾನ ಮಾಡುವುದು ಕಾಂಗ್ರೆಸ್ ಹೈ ಕಮಾಂಡ್ ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲ್ಲ ಎಂದರು.
ಚಂದ್ರಶೇಖರ್ ಸ್ವಾಮೀಜಿ ಹೇಳಿಕೆ ಪ್ರತಿಕ್ರಿಯೆ ನೀಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.