ಮೈಸೂರು: ಕೆಲವು ಮಹಾನ್ ವ್ಯಕ್ತಿಗಳನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಸಾಧನೆಗಳು ಅಮರವಾಗಿರುತ್ತವೆ. ಇವರ ಸಾಲಿನಲ್ಲಿ ನಾಡಪ್ರಭು ಕೆಂಪೇಗೌಡ ಸೇರುತ್ತಾರೆ ಎಂದು ಸಂಸ ದ ಪ್ರತಾಪ್ ಸಿಂಹ ಹೇಳಿದರು.
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಮಾತನಾಡಿ, ರಾಜ್ಯದ ಶೇ.52 ಆದಾಯ ಬೆಂಗಳೂರಿನಿಂದ ಬರುತ್ತಿದೆ. ಕರ್ನಾಟಕಕ್ಕೆ ಬೆಂಗಳೂರು ಕಾಮಧೇನುವಿನಂತಿದೆ. ಇಂತಹ ಮಹಾನ್ ವ್ಯಕ್ತಿಗಳ ಕೊಡುಗೆಗಳ ಬಗ್ಗೆ ಧನ್ಯತಾಭಾವ ಮನಸ್ಸಿನಲ್ಲಿರಬೇಕು ಎಂದು ಹೇಳಿದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ನಮ್ಮಲ್ಲಿ ಒಗ್ಗಟ್ಟು ಸಂಘಟನೆಯ ಕೊರತೆ ಇದೆ. ಸಮುದಾಯದ ತಳಮಟ್ಟದಲ್ಲಿರುವ ವ್ಯಕ್ತಿಯ ನೆರವಿಗೆ ಸಂಘಟನೆಗಳು ಪೂರಕವಾಗುವ ನಿಟ್ಟಿನಲ್ಲಿ ಸಮುದಾಯದವರು ಒಗ್ಗಟ್ಟಾಗಿರಬೇಕು. ರಾಜ್ಯಮಟ್ಟದಲ್ಲಿ ನೀಡುವ ಕೆಂಪೇಗೌಡ ರತ್ನ ಪ್ರಶಸ್ತಿಯಂತೆ ಜಿಲ್ಲಾ ಮಟ್ಟದಲ್ಲೂ ಪ್ರತಿ ವರ್ಷ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, 2015ರಲ್ಲಿ ಮೈಸೂರಿನ ಮಹಾರಾಜ ಮೈದಾನದಲ್ಲಿ 60 ಸಾವಿರ ಜನರನ್ನು ಸೇರಿಸಿ ಕೆಂಪೇಗೌಡರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿತ್ತು. ದೆಹಲಿಯಲ್ಲಿ ಕೂಡ ಕೆಂಪೇಗೌಡರ ಉತ್ಸವ ಮಾಡಿದ್ದ ಸಂತೋಷ ನಮಗಿದೆ ಎಂದರು.
ಆದಿಚುಂಚನಗಿರಿ ಶಾಖಾಮಠದ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿ, ಪಾಲಿ ಕೆ ಉಪಮೇಯರ್ ಡಾ.ಜಿ. ರೂಪ, ಸಾಹಿ ತಿ ಬನ್ನೂರು ಕೆ. ರಾಜು, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ. ಗೋವಿಂದರಾಜು, ಕಸಾಪ ಜಿಲ್ಲಾ ಧ್ಯಕ್ಷ ಮಡ್ಡೀಕೆರೆ ಗೋಪಾಲ್ ಇದ್ದರು.