ದಾವಣಗೆರೆ: ಕೃಷಿ, ಕೆರೆ-ಕಟ್ಟೆಗಳು ಮತ್ತು ವಿವಿಧ ಮಾರುಕಟ್ಟೆಗಳಿಗೆ 480 ವರ್ಷಗಳ ಹಿಂದೆಯೇ ಕೆಂಪೇಗೌಡರು ಭೂಮಿ ಮೀಸಲಿಟ್ಟು ವ್ಯವಸ್ಥಿತವಾಗಿ ಬೆಂಗಳೂರು ನಗರ ನಿರ್ಮಿಸಿರುವುದು ಆದರ್ಶನೀಯ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ ಬಣ್ಣಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಒಕ್ಕಲಿಗರ ಸಂಘದಿಂದ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 509ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಕಾಲು ಭಾಗ ಜನರು ಬೆಂಗಳೂರು ನಗರದಲ್ಲಿ ವಾಸಿಸುತ್ತಿದ್ದಾರೆ. ಕೆಂಪೇಗೌಡರು ಅಷ್ಟೊಂದು ಸುವ್ಯವಸ್ಥಿತವಾಗಿ ಯೋಜಿಸಿ ಈ ನಗರ ನಿರ್ಮಿಸಿದ್ದಾರೆ. ಕೆರೆ-ಕಟ್ಟೆ, ದೇವಸ್ಥಾನ, ಮಾರುಕಟ್ಟೆಗೆ ಬೇಕಾದಷ್ಟು ಭೂಮಿ ಮೀಸಲಿಟ್ಟಿದ್ದರು. ಆದರೆ, ಇಂದು ದಾವಣಗೆರೆ ಸೇರಿದಂತೆ ರಾಜ್ಯದ ನಗರಗಳಲ್ಲಿ ಒತ್ತುವರಿ ಮಾಡುವ ಬುದ್ಧಿಯೇ ಹೆಚ್ಚುತ್ತಿದೆ ಎಂದರು.
ಹೂವಿನಹೊಳೆ ಪ್ರತಿಷ್ಠಾನದ ಅಧ್ಯಕ್ಷ ನಂದಿ ಜೆ. ಹೂವಿನಹೊಳೆ ನಾಡಪ್ರಭು ಕೆಂಪೇಗೌಡರ ಕುರಿತು ಉಪನ್ಯಾಸ ನೀಡಿ, ಕೆಂಪೇಗೌಡರ ಕೊಡುಗೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಅವರು ಬೆಂಗಳೂರು ನಗರವನ್ನು ಅತ್ಯಂತ ವ್ಯವಸ್ಥಿತವಾಗಿ ಎಲ್ಲ ವರ್ಗದವರ ಅನುಕೂಲಕ್ಕಾಗಿ ವಿವಿಧ ಪೇಟೆಗಳು, ಮಾರುಕಟ್ಟೆ, ಕೃಷಿಗಾಗಿ ಕೆರೆ-ಕಟ್ಟೆ ಸ್ಥಾಪಿಸುವ ಮೂಲಕ ಜಾತ್ಯಾತೀತ ನಾಯಕತ್ವ ಮೆರೆದಿದ್ದರು ಎಂದರು.
ಕೆಂಪೇಗೌಡರಿಗೆ ರಕ್ತಗತವಾಗಿ ಉತ್ತಮ ನಾಯಕತ್ವ ಗುಣಗಳು ಬಂದಿದ್ದವು. ತಂದೆ ಜೊತೆ ವಿಜಯನಗರಕ್ಕೆ ಭೇಟಿ ನೀಡಿದಾಗ ಅಲ್ಲಿನ ವೈಭವಕ್ಕೆ ಬೆರಗಾಗಿ ಇಂತಹ ಒಂದು ಭವ್ಯ ನಗರ ನಿರ್ಮಿಸಬೇಕೆಂದು ಕನಸು ಕಂಡಿದ್ದರು. 1531ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಅಧಿಕಾರ ಸ್ವೀಕರಿಸಿದ ಕೆಂಪೇಗೌಡರು ಸುಮಾರು 38 ವರ್ಷ ಕಾಲ ಆಳ್ವಿಕೆ ನಡೆಸಿದರು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಕೆಂಪೇಗೌಡರು ಜನ ಜೀವನ ವ್ಯವಸ್ಥೆಗೆ ಅಗತ್ಯವಾಗಿ ಬೇಕಾದಂತಹ ನೀರಿಗಾಗಿ ಕೆರೆಗಳನ್ನು ನಿರ್ಮಿಸಿದರು. ಸರ್ವ ವರ್ಗದ ಜನರ ಜೀವನ ವ್ಯವಸ್ಥೆಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥಿತವಾಗಿ ನಗರ ನಿರ್ಮಿಸಿದ್ದು ಇವರ ದೂರದೃಷ್ಟಿ, ಪರಿಕಲ್ಪನೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಮೇಯರ್ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್ ಪಿ. ಚಮನ್‌ಸಾಬ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಜೆ.
ನಾಗರಾಜ್, ಎಸ್‌ಪಿ ಉದೇಶ್, ಉಪವಿಭಾಗಾಧಿಕಾರಿ ಸಿದ್ದೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ವೇದಿಕೆಯಲ್ಲಿದ್ದರು.