ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಈ ವರ್ಷದಿಂದ ಸರಕಾರವು ಕೊಡಮಾಡುತ್ತಿರುವ ‘ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮತ್ತು ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಜೂನ್ 27ರ ಸೋಮವಾರ ವಿಧಾನಸೌಧದಲ್ಲಿ ನಡೆಯಲಿರುವ ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಮೂವರಿಗೂ ತಲಾ 5 ಲಕ್ಷ ರೂಪಾಯಿ ನಗದುಸಹಿತ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿ ಕೊಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಚಿವ ಅಶ್ವತ್ಥ ನಾರಾಯಣ ಅವರು, ಮೂವರು ಪುರಸ್ಕೃತರ ಪೈಕಿ ಹಿರಿಯರಾದ ಕೃಷ್ಣ ಅವರನ್ನು ಶನಿವಾರ ಅವರ ಮನೆಯಲ್ಲಿ ಭೇಟಿಯಾಗಿ, ಕೆಂಪೇಗೌಡ ಜಯಂತಿಗೆ ಆಗಮಿಸಿ ಪ್ರಶಸ್ತಿ ಸ್ವೀಕರಿಸಬೇಕೆಂದು ಸರಕಾರದ ಪರವಾಗಿ ಆಹ್ವಾನಿಸಿದರು. ಇದಕ್ಕೆ ಕೃಷ್ಣ ಅವರು ಸಮ್ಮತಿಸಿ, ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಮೂವರೂ ಪುರಸ್ಕೃತರು ಬೆಂಗಳೂರಿನ ಬೆಳವಣಿಗೆಗೆ ಮತ್ತು ಕೀರ್ತಿಗೆ ತಮ್ಮದೇ ಆದ ಅನನ್ಯ ವಿಧಾನಗಳ ಮೂಲಕ ಅನುಪಮ ಕೊಡುಗೆ ನೀಡಿದ್ದಾರೆ’ ಎಂದು ಬಣ್ಣಿಸಿದರು.
Related Articles
ಸಾಧಕರನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರದ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಇದರಲ್ಲಿ ಉದ್ಯಮಿ ಮೋಹನದಾಸ್ ಪೈ, ವಿವೇಕಾನಂದ ಯೂತ್ ಮೂವ್ ಮೆಂಟ್ ಸ್ಥಾಪಕ ಆರ್.ಬಾಲಸುಬ್ರಹ್ಮಣ್ಯಂ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಅವರು ಸದಸ್ಯರಾಗಿದ್ದರು. ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್. ವಿನಯದೀಪ್ ಅವರು ಸದಸ್ಯ ಕಾರ್ಯದರ್ಶಿ ಆಗಿದ್ದರು.