Advertisement

ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಪಟ್ಟಿ ಪ್ರಕಟ 

12:58 PM Aug 16, 2018 | |

ಬೆಂಗಳೂರು: ನಾಡಪ್ರಭು ಕೆಂಪೇಗೌಡ ದಿನಾಚರಣೆಯ ಅಂಗವಾಗಿ ಪ್ರತಿವರ್ಷ ಬಿಬಿಎಂಪಿಯಿಂದ ನೀಡಲಾಗುವ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದ್ದು, ಈ ಬಾರಿ 270 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

Advertisement

ವಿವಿಧ ಕಾರಣಗಳಿಂದ ಮೂರು ಬಾರಿ ಮುಂದೂಡಲಾಗಿದ್ದ ಕೆಂಪೇಗೌಡ ದಿನಾಚರಣೆ ಗುರುವಾರ (ಆ.16) ನಡೆಯಲಿದ್ದು, ಬೆಳಗ್ಗೆಯಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದರೊಂದಿಗೆ ಮಧ್ಯಾಹ್ನ 2 ಗಂಟೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಉತ್ತಮ ನೌಕರರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪುರಸ್ಕೃತರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

ಈ ಬಾರಿಯ ಕೆಂಪೇಗೌಡ ಪ್ರಶಸ್ತಿ ನಟರಾದ ಸುದೀಪ್‌, ಅರವಿಂದ ರಮೇಶ್‌, ಟಿ.ಎನ್‌.ಸೀತಾರಾಂ, ಸಾಹಿತಿ ಎಂ.ಎಸ್‌.ಆಶಾದೇವಿ, ತಲಕಾಡು ಚಿಕ್ಕರಂಗೇಗೌಡ, ರಂಗಭೂಮಿ ಕಲಾವಿದ ಶ್ರೀನಿವಾಸ ಜಿ.ಕಪ್ಪಣ್ಣ, ಡಾ. ಕಾಮಿನಿ ರಾವ್‌, ತಿಮ್ಮೇಗೌಡ ಸೇರಿದಂತೆ ಪ್ರಮುಖರನ್ನು ಆಯ್ಕೆ ಮಾಡಲಾಗಿದೆ. 

ಕೆಂಪೇಗೌಡ ದಿನಾಚರಣೆಗೆ ಪಾಲಿಕೆಯಿಂದ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಬುಧವಾರ ಬೆಳಗ್ಗೆ ಕೆಂಪೇಗೌಡ ನಿರ್ಮಿತ ನಾಲ್ಕು ಗಡಿಗೋಪುರ ಹಾಗೂ  ಮಾಗಡಿ ಕೆಂಪೇಗೌಡ ಸಮಾಧಿಯಿಂದ ಜ್ಯೋತಿಯಾತ್ರೆ ಆರಂಭವಾಗುವ ಮೂಲಕ ಜಯಂತಿ ಆಚರಣೆಗೆ ಚಾಲನೆ ದೊರೆಯಲಿದೆ.

ಬೆಳಗ್ಗೆ 9 ಗಂಟೆಗೆ ಲಾಲ್‌ಬಾಗ್‌, ಕೆಂಪಾಂಬುಧಿ ಕೆರೆ, ಹಲಸೂರು ಹಾಗೂ ಮೇಖೀ ವೃತ್ತದಲ್ಲಿರುವ ನಾಲ್ಕು ಗೋಪುರಗಳಿಂದ ಜ್ಯೋತಿಯಾತ್ರೆ ಆರಂಭವಾಗಿ, ಬಿಬಿಎಂಪಿಯ ಕೇಂದ್ರ ಕಚೇರಿಗೆ ಬಂದು ಪೂರ್ಣವಾಗಲಿದೆ. ಇತ್ತೀಚೆಗೆ ಪತ್ತೆಯಾದ ಮಾಗಡಿಯಲ್ಲಿನ ಕೆಂಪೇಗೌಡರ ಸಮಾಧಿಯಿಂದಲೂ ಜ್ಯೋತಿಯಾತ್ರೆ ನಡೆಯಲಿದ್ದು, ಅದು ಸಹ ಬಿಬಿಎಂಪಿ ಕೇಂದ್ರ ಕಚೇರಿಗೆ ಬಂದು ಕೊನೆಗೊಳ್ಳಲಿದೆ.

Advertisement

ಜ್ಯೋತಿಯಾತ್ರೆ ವೇಳೆ ಗೊಂಬೆ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಮೊದಲಾದ ಜಾನಪದ ಕಲಾ ತಂಡಗಳು ದಾರಿಯುದ್ದಕ್ಕೂ ಪ್ರದರ್ಶನ ನೀಡುವ ಮೂಲಕ ಯಾತ್ರೆಗೆ ಮೆರುಗು ನೀಡಲಿವೆ. ಜತೆಗೆ ಸ್ತಬ್ಧಚಿತ್ರಗಳ ಪ್ರದರ್ಶನ ಕೂಡಾ ಮೆರವಣಿಗೆಯ ಆಕರ್ಷಣೆ ಹೆಚ್ಚಿಸಲಿವೆ.

ಬೆಳಗ್ಗೆ 8 ಗಂಟೆಗೆ ಬಿಬಿಎಂಪಿ ಮುಂಭಾಗದ ಕೆಂಪೇಗೌಡ ಹಾಗೂ ಸೊಸೆ ಲಕ್ಷ್ಮಿದೇವಿ ಪ್ರತಿಮೆಗೆ ಮೇಯರ್‌ ಆರ್‌.ಸಂಪತ್‌ ರಾಜ್‌ ಮಾಲಾರ್ಪಣೆ ಮಾಡಲಿದ್ದು, 9 ಗಂಟೆಗೆ ಲಾಲ್‌ಬಾಗ್‌ನಲ್ಲಿರುವ ಗಡಿಗೋಪುರಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪೂಜೆ ನೆರವೇರಿಸಿ ಜ್ಯೋತಿಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಕೋರಮಂಗಲದಲ್ಲಿರುವ ಸೊಸೆ ಲಕ್ಷ್ಮಿದೇವಿ ಸಮಾಧಿಯ ಬಳಿ ಪೂಜೆ ನಡೆಯಲಿದೆ.

ಬೆಳಗ್ಗೆ 11 ಗಂಟೆಗೆ ಬಿಬಿಎಂಪಿಯ ಕೇಂದ್ರ ಕಚೇರಿಗೆ ಆಗಮಿಸಲಿರುವ ನಾಲ್ಕು ಗಡಿಗೋಪುರಗಳ ಜ್ಯೋತಿಯಾತ್ರೆಯನ್ನು ಮೇಯರ್‌ ಹಾಗೂ ಉಪಮುಖ್ಯಮಂತ್ರಿ ಬರಮಾಡಿಕೊಳ್ಳಲಿದ್ದಾರೆ. ನಂತರದಲ್ಲಿ ಪಾಲಿಕೆ ಆವರಣದ ಡಾ.ರಾಜ್‌ಕುಮಾರ್‌ ಗಾಜಿನ ಮನೆಯಲ್ಲಿ ಅಧಿಕಾರಿಗಳು ಹಾಗೂ ನೌಕರರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವಿವಿಧ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿವೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿರುವ ಪ್ರಮುಖರು
ಚಿತ್ರರಂಗ:
ಸುದೀಪ್‌, ರಮೇಶ್‌ ಅರವಿಂದ್‌, ಬಿ.ಸುರೇಶ್‌, ಟಿ.ಎನ್‌.ಸೀತಾರಾಂ, ಅನುಶ್ರೀ, ಸೃಜನ್‌ ಲೋಕೇಶ್‌, ಬೆಂಗಳೂರು ನಾಗೇಶ್‌, ಎಂ.ಎನ್‌.ಸುರೇಶ್‌. 

ವೈದ್ಯಕೀಯ ಸೇವೆ: ಡಾ.ನವೀನ್‌, ಡಾ.ಸಂಜಯ್‌ ರಾವ್‌, ಡಾ.ಕಾಮಿನಿ ರಾವ್‌, ಡಾ.ಚಾಂಡಿ, ಡಾ.ವಿಶಾಲ್‌ ರಾವ್‌, ಡಾ. ಬಿ.ಎ.ನಾಗರಾಜ್‌.

ಸಾಹಿತ್ಯ: ಡಾ.ಎಂ.ವಿ.ಶ್ರೀನಿವಾಸ್‌, ಎಂ.ಜಿ.ನಾಗರಾಜ್‌, ಎಂ.ಎಸ್‌.ಆಶಾದೇವಿ, ತಲಕಾಡು ಚಿಕ್ಕರಂಗೇಗೌಡ, ಅಪ್ಪಣ್ಣ ರೆಡ್ಡಿ ನಾರಾಯಣ ಘಟ್ಟ ಹಾಗೂ ತಿಮ್ಮೇಗೌಡ.

ಇತರೆ ಕ್ಷೇತ್ರ: ಡಾ.ಪದ್ಮಭೂಷಣ ಮಹದೇವಪ್ಪ (ಕೃಷಿ), ಪ್ರದೀಪ್‌ ಆರ್ಯ (ಭಾರತೀಯ ಸೇನೆ), ಪಿ. ಧನಂಜಯ (ರಂಗಭೂಮಿ), ಡಾ.ಸಚ್ಚಿದಾನಂದ್‌ (ಉಪ ಕುಲಪತಿ), ಓಂ ಸ್ವರೂಪ್‌ ಗೌಡ (ಕ್ರೀಡೆ), ಜಿ.ಮೂಡಲಪ್ಪ (ರಂಗಭೂಮಿ), ಡಾ.ರವೀಂದ್ರ (ಸರ್ಕಾರಿ ಸೇವೆ), ಕೆ.ಎಂ.ಇಂದ್ರ (ಸಂಗೀತ), ರವಿಶಂಕರ್‌ ಎನ್‌.ಎಸ್‌.ರಾವ್‌ (ಕ್ರೀಡೆ), ಜೈಬೋ, ಕೆ. ಮಾಯಪ್ಪ ಹಾಗೂ ಜಮಾಲ್‌ (ಶಿಕ್ಷಣ), ಅರುಳಾಳನ್‌ (ಧಾರ್ಮಿಕ), ಶ್ರೀನಿವಾಸ್‌ ಜಿ.ಕಪ್ಪಣ್ಣ (ರಂಗಭೂಮಿ), ನಾಗರಾಜ್‌ ಶೆಣೈ (ಸಮಾಜಸೇವೆ), ಸಿ.ಜಿ.ಶ್ರೀನಿವಾಸ್‌ (ಉದ್ಯಮಿ), ವಿನಯ್‌ ಮೃತ್ಯುಂಜಯ (ಕ್ರೀಡೆ), ಶ್ರೀನಿವಾಸ್‌ ರೆಡ್ಡಿ (ಸಮಾಜ ಸೇವೆ).

ಮಾಧ್ಯಮ ಕ್ಷೇತ್ರ: ಪತ್ರಕರ್ತರಾದ ಎಂ.ನಾಗರಾಜು, ರವಿಶಂಕರ್‌ ಭಟ್‌, ವೆಂಕಟಸುಬ್ಬಯ್ಯ, ಸುದರ್ಶನ್‌, ಶಿವರಾಮ್‌, ಬಿ.ಪಿ.ಮಲ್ಲಪ್ಪ, ನಾರಾಯಣ ಸ್ವಾಮಿ, ಬಿ.ಎನ್‌.ರಮೇಶ್‌, ಜ್ಯೋತಿ ಇರ್ವತ್ತೂರು, ಎಂ.ಸಿ. ಶೋಭ, ಜಿ. ರಾಮಕೃಷ್ಣ ಇನ್ನಿತರರು.

Advertisement

Udayavani is now on Telegram. Click here to join our channel and stay updated with the latest news.

Next