ಕಡಬ: ಕಡಬ ತಾಲೂಕಿನ ಕೊಯಿಲ ಗ್ರಾಮದ ಕೆಮ್ಮಾರ ಶಾಲೆಯ ಬಳಿಯ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ದುರಂತ ಸಂಭವಿಸಿದ್ದು, ಮನೆಯ ಒಳಭಾಗ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ರವಿವಾರ ಮಧ್ಯಾಹ್ನದ ಸಂಭವಿಸಿದೆ.
ಕೆಮ್ಮಾರ ಅಬ್ದುಲ್ ರಹಿಮಾನ್ ಅವರ ಮನೆಯಲ್ಲಿ ಘಟನೆ ಸಂಭವಿಸಿದೆ. ಬೆಡ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಇಡೀ ಮನೆಗೆ ವ್ಯಾಪಿಸಿಕೊಂಡಿದೆ.
ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಶಿಂಗ್ ಮೆಷಿನ್ ಸಹಿತ ಒಳಗಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಎರಡು ಕಡೆ ಗೋಡೆ ಬಿರುಕು ಬಿಟ್ಟಿದೆ.
ಬೆಂಕಿ ಕಾಣಿಸಿಕೊಂಡ ಕೋಣೆಯಲ್ಲಿ ಗ್ರಾನೈಟ್ ಮತ್ತು ಅಡುಗೆ ಕೋಣೆಯಲ್ಲಿ ಹಾಸಲಾಗಿದ್ದ ಟೈಲ್ಸ್ ಸಿಡಿದು ಹೋಗಿದೆ. ಸುಮಾರು 35 ಲಕ್ಷ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಅಬ್ದುಲ್ ರಹಿಮಾನ್ ಕಂದಾಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮನೆ ಮಾಲಕ ಅಬ್ದುಲ್ ರಹಿಮಾನ್ ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ಸಂಬಂಧಿಕರ ಮನೆಗೆ ತೆರಳಿದ್ದು, ಮನೆಯಲ್ಲಿ ವೃದ್ಧ ತಾಯಿ ಸಕೀನ ಮಾತ್ರ ಇದ್ದರು. ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿದ ಅವರು ಹೊರಗೆ ಬಂದು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಈ ಮನೆಯನ್ನು ವರ್ಷದ ಹಿಂದೆ ನಿರ್ಮಾಣ ಮಾಡಲಾಗಿತ್ತು.
ಸ್ಥಳೀಯರಾದ ಸಲೀಕತ್, ಅಬೂ ಬಕ್ಕರ್, ರಿಯಾರ್, ಜುನೈದ್ ಆಗಮಿಸಿ ಮನೆಯ ವಿದ್ಯುತ್ ಸಂಪರ್ಕದ ಸ್ವಿಚ್ ಆಫ್ ಮಾಡಿ ಹಾಗೂ ಗ್ಯಾಸ್ ಸಂಕರ್ಪ ಕಡಿತಗೊಳಿಸಿ ಹೊರ ಹಾಕಿ ಹೆಚ್ಚಿನ ದುರಂತವನ್ನು ತಪ್ಪಿಸಿದ್ದಾರೆ. ಪುತ್ತೂರಿನಿಂದ ಅಗ್ನಿ ಶಾಮಕ ದಳ ದವರು ಆಗಮಿಸಿ ಬೆಂಕಿಯನ್ನು ಸಂಪೂರ್ಣ ವಾಗಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊçಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಸುಭಾಸ್, ಸದಸ್ಯ ನಝೀರ್ ಪೂರಿಂಗ, ಕೊಯಿಲ ಗ್ರಾಮ ಆಡಳಿತಾಧಿಕಾರಿ ಶೇಷಾದ್ರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.