ಮದ್ದೂರು: ಕೆಮ್ಮಣ್ಣು ನಾಲೆ ಸಂಪರ್ಕ ಕಲ್ಪಿಸುವ ಸೇತುವೆಗಳು ಕಳೆದ ಹಲವಾರು ತಿಂಗಳಿಂದಲೂ ದುರಸ್ತಿಯಲ್ಲಿದ್ದರೂ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವ ಬಗ್ಗೆ ಸ್ಥಳೀಯ ರೈತರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಚನ್ನೇಗೌಡನದೊಡ್ಡಿ ಗ್ರಾಮದಿಂದ ದೇಶಹಳ್ಳಿ, ವಳಗೆರೆ ಹಳ್ಳಿ, ಪಟ್ಟಣ ಸೇರಿ ಸ್ಥಳೀಯ ರೈತರ ಜಮೀನುಗಳಿಗೆ ತೆರಳುವ ನಾಲಾ ರಸ್ತೆ ಸೇತುವೆ ತಿಂಗಳಿಂದಲೂ ಮುರಿದು ಬಿದ್ದಿದೆ. ಆದರೆ, ಇದುವರೆಗೂ ಅಧಿಕಾರಿಗಳು ದುರಸ್ತಿಗೆ ಮುಂದಾ ಗಿಲ್ಲ. ಎಂ.ಸಿ.ಲಿಂಗೇಗೌಡರ ತೋಟದ ಜಮೀನಿನಿಂದ ಸಂಪರ್ಕ ಕಲ್ಪಿಸುವ ಕೆಮ್ಮಣ್ಣು ನಾಲೆ ಸೇತುವೆ ಕಳೆದ 2 ವರ್ಷಗಳಿಂದಲೂ ಮುರಿದು ಬಿದ್ದು ಸಂಚಾರಕ್ಕೆ ತೊಡಕ್ಕುಂಟಾಗಿದೆ. ಆದರೆ, ಅಧಿಕಾರಿಗಳು ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ.
ಈವರೆಗೂ ಸೂಕ್ತ ಕ್ರಮವಿಲ್ಲ: ಸೇತುವೆ ಮುರಿದು ಬಿದ್ದಿರುವ ಪರಿಣಾ ಮವಾಗಿ ಪಟ್ಟಣಕ್ಕೆ ತೆರಳುವ ನಿವಾಸಿಗಳು ಸುಮಾರು 2 ಕಿ.ಮೀ. ಕ್ರಮಿಸಬೇಕಾದ ಅನಿವಾ ರ್ಯತೆಯಿದೆ. ನಾಲಾ ಮಾರ್ಗದ ರಸ್ತೆ ಡಾಂಬ ರೀಕರಣ ಕೈಗೊಳ್ಳಲು ಅನುದಾನ ಬಿಡುಗಡೆಯಾಗಿದ್ದರೂ ಅಪೂರ್ಣ ಕಾಮಗಾರಿಯಿಂದಾಗಿ ಹಲವು ಅದ್ವಾನ ಕಾಣಸಿಗುತ್ತಿವೆ. ನಾಲೆಯುದ್ದಕ್ಕೂ ಬೆಳೆದು ನಿಂತಿರುವ ಆಳೆತ್ತರದ ಗಿಡಗಂಟಿ, ತೂಬು ನಿರ್ವಹಣೆ ಕೊರತೆ, ಕಿತ್ತು ನಿಂತಿರುವ ರಸ್ತೆ, ನಾಲೆ ದುರಸ್ತಿ ಕಾಣದೆ ಹಲವಾರು ವರ್ಷ ಕಳೆದಿದ್ದರೂ ಸ್ಥಳೀಯ ಅಧಿಕಾರಿಗಳು ಕ್ರಮವಹಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಚನ್ನೇಗೌಡನದೊಡ್ಡಿ ಗ್ರಾಮದಿಂದ ಮದ್ದೂರಮ್ಮ ಕೆರೆವರೆಗೂ ರಸ್ತೆ ಎರಡೂ ಬದಿ ಆಳೇತ್ತರದ ಗಿಡ ಬೆಳೆದುನಿಂತಿವೆ. ಆದರೆ, ತೆರವು ಮಾಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ನಿತ್ಯ ಅಪಘಾತ: ಚನ್ನೇಗೌಡನದೊಡ್ಡಿ ಗ್ರಾಮದ ನಾಲಾ ಸೇತುವೆ ಮುರಿದು ಬಿದ್ದು ತಿಂಗಳುಗಳೇ ಕಳೆದಿವೆ. ಜತೆಗೆ ತಡೆಗೋಡೆ ಇಲ್ಲದೆ ಹಲವು ಅಪಾಯಗಳಿಗೆ ಕಾರಣವಾಗಿದ್ದು ಈ ಭಾಗದ ರೈತರು ತಮ್ಮ ಜಮೀನುಗಳಿಗೆ ತೆರಳಲು ಸಂಕಷ್ಟ ಪಡಬೇಕಿದೆ. ಈಗಾಗಲೇ ಹಲವಾರು ಮಂದಿ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಪ್ರತಿನಿತ್ಯ ಜರುಗುತ್ತಿವೆ.ಈ ಸಂಬಂಧ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಗಮನಕ್ಕೂ ತಂದರೂ ಇದುವರೆಗೂ ದುರಸ್ತಿಗೆ ಮುಂದಾಗಿಲ್ಲ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೆಮ್ಮಣ್ಣು ನಾಲಾ ಸೇತುವೆ ದುರಸ್ತಿಗೆ ಈಗಾಗಲೇ ಡಿಪಿಆರ್ ಪ್ರಕ್ರಿಯೆ ಮುಗಿದಿದೆ. ಅನುದಾನ ಬಿಡುಗಡೆ ಬಳಿಕ ಸೇತುವೆ ನಿರ್ಮಾಣಕ್ಕೆ ಮುಂದಾಗಲಿದ್ದೇವೆ. ಜತೆಗೆ ಚನ್ನೇಗೌಡನದೊಡ್ಡಿ ಗ್ರಾಮದ ನಾಲಾ ಸೇತುವೆ ದುರಸ್ತಿಗೆ ತಾತ್ಕಾಲಿಕ ಕ್ರಮವಹಿಸಲಾಗುವುದು. –
ತಾರಾ, ಎಇಇ, ಕಾವೇರಿ ನೀರಾವರಿ ನಿಗಮ, ಮದ್ದೂರು
ಕೆಮ್ಮಣ್ಣು ನಾಲಾ ಸೇತುವೆ ಮುರಿದುಬಿದ್ದು ಹಲವು ದಿನಗಳೇ ಕಳೆದಿದ್ದರೂ ಇದುವರೆಗೂ ದುರಸ್ತಿ ಮಾಡಿಲ್ಲ. ಅಧಿಕಾರಿಗಳು ದುರಸ್ತಿಗೆ ಮುಂದಾಗದಿದ್ದಲ್ಲಿ ಇಲಾಖೆ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು.
– ಸಿ.ಅಪೂರ್ವಚಂದ್ರ, ತೋಟದ ಮನೆ ನಿವಾಸಿ, ಎಚ್.ಕೆ.ವಿ.ನಗರ
– ಎಸ್.ಪುಟ್ಟಸ್ವಾಮಿ