Advertisement

ಕೊರೊನಾ ತಡೆಗೆ ಸರ್ವರ ಸಹಕಾರ ಅವಶ್ಯ

05:16 PM Mar 22, 2020 | Naveen |

ಕೆಂಭಾವಿ: ಕೊರೊನಾ ವೈರಸ್‌ ಹರಡದಂತೆ ದೇಶದೆಲ್ಲೆಡೆ ಮುನ್ನೆಚ್ಚರಿಕೆಯಾಗಿ ಕೇಂದ್ರ-ರಾಜ್ಯ ಸರ್ಕಾರ ತಿಳಿವಳಿಕೆ ಸೇರಿದಂತೆ ಅಗತ್ಯ ಕ್ರಮ ಕೈಗೊಂಡಿದ್ದು ಇದಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ| ಆರ್‌.ವಿ. ನಾಯಕ ಮನವಿ ಮಾಡಿದರು.

Advertisement

ಶನಿವಾರ ಪಟ್ಟಣದ ಸಂಜೀವನಗರ ಬಡಾವಣೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಆಯುಷ್‌ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ವೈರಸ್‌ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶ-ರಾಜ್ಯದಲ್ಲಿ ವಾಸಿಸುವ ಜನರಿಂದ ಸೋಂಕು ಹರಡುವುದಿಲ್ಲ. ಬೇರೆ ದೇಶದಿಂದ ಜನರು ಬಂದರೆ ಅಂಥವರಿಂದ ಈ ಕಾಯಿಲೆ ಬರುತ್ತಿದ್ದು, ಈ ಕುರಿತು ಜಾಗೃತರಾಗಬೇಕು. ಜನತೆ ನಿತ್ಯ ಜೀವನ ಕ್ರಮದಲ್ಲಿ ಸ್ವಲ್ಪ ಸುಧಾರಣೆ ಕಂಡುಕೊಂಡು ಮೇಲಿಂದ ಮೇಲೆ ಕೈತೊಳೆದುಕೊಳ್ಳುವುದು, ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆ ಕಟ್ಟಿಕೊಂಡು ಓಡಾಡುವುದು, ಆದಷ್ಟು ಜನರಿಂದ ದೂರ ಉಳಿಯುವುದು ಸೇರಿದಂತೆ ವಿವಿಧ ಬಗೆಯ ಶುಚಿತ್ವ ಕಾಪಾಡಿಕೊಂಡರೆ ಈ ರೋಗ ತಡೆಗಟ್ಟಬಹುದು ಎಂದು ಹೇಳಿದರು.

ತಾಲೂಕಿನಲ್ಲಿ ಇದುವರೆಗೆ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ವಿದೇಶದಿಂದ ತಾಲೂಕಿಗೆ ಒಟ್ಟು 17 ಜನ ಬಂದಿದ್ದು ಅವರಲ್ಲಿ 4 ಜನರಿಗೆ ಪ್ರತ್ಯೇಕತೆ ಇರುವ ಅವಧಿ ಮುಗಿದಿದ್ದು, ಇನ್ನುಳಿದ ಜನರಿಗೆ 14 ದಿನಗಳ ಕಾಲ ಪ್ರತ್ಯೇಕವಾಗಿರುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ದೇವೇಂದ್ರಪ್ಪ ಹೆಗಡೆ ಮಾತನಾಡಿ, ಯಾವುದೇ ರೋಗ ತಡೆಗಟ್ಟಲು ಸಾಮಾಜಿಕ ಕಳಕಳಿ ಜೊತೆಗೆ ವೈಜ್ಞಾನಿಕ ಮನೋಭಾವನೆ ಮುಖ್ಯ. ಪಟ್ಟಣದಲ್ಲಿ ಈಗಾಗಲೇ ಪುರಸಭೆ ವತಿಯಿಂದ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಸಾರ್ವಜನಿಕರು, ವ್ಯಾಪಾರಸ್ಥರು ಕೈಜೋಡಿಸಬೇಕೆಂದು ಮನವಿ ಮಾಡಿದರು.

Advertisement

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸಂಜೀವರಾವ್‌ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ, ಕೊರೊನಾ ವೈರಸ್‌ ಕುರಿತು ಜನಜಾಗೃತಿ ಮೂಡಿಸಲು ಅಧಿಕಾರಿಗಳೊಂದಿಗೆ ಎಲ್ಲ ಮಾಧ್ಯಮ ಸ್ನೇಹಿತರು ಕೈಜೋಡಿಸಿದ್ದು ಯಾವುದೇ ಸಂದರ್ಭಗಳಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಪತ್ರಕರ್ತರು ತಯಾರಾಗಿದ್ದಾರೆ. ಪ್ರಧಾನಿ ಮೋದಿ ಮಾ.2ರಂದು ಕರೆ ನೀಡಿರುವ ಜನತಾ ಕರ್ಫ್ಯೂಗೆ ಎಲ್ಲರೂ ಬೆಂಬಲಿಸಬೇಕೆಂದು ಮನವಿ ಮಾಡಿದರು.

ನಂತರ ಮನೆಮನೆಗೆ ತೆರಳಿ ಕರಪತ್ರ ವಿತರಿಸಿ ಜನರಿಗೆ ಕೊರೊನಾ ತಿಳಿವಳಿಕೆ ನೀಡಲಾಯಿತು. ಉಪ ತಹಶೀಲ್ದಾರ್‌ ಮಲ್ಲಿಕಾರ್ಜುನ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪವನ ಕುಲಕರ್ಣಿ, ಸಮುದಾಯ ಕೇಂದ್ರದ ಆರೋಗ್ಯಾಧಿಕಾರಿ ಡಾ| ಧರ್ಮರಾಜ, ಆಯುಷ್‌ ವೈದ್ಯಾಧಿಕಾರಿ ಡಾ| ಮೀರಾ ಜೋಷಿ, ಡಾ| ಸಿದ್ದು ನ್ಯಾಮಗೊಂಡ, ಪುರಸಭೆ ಸದಸ್ಯರಾದ ರಾಘವೇಂದ್ರ ದೇಶಪಾಂಡೆ, ಮಹಿಪಾಲರೆಡ್ಡಿ ಡಿಗ್ಗಾವಿ, ವಿಕಾಸ ಸೊನ್ನದ, ಶಂಕ್ರಪ್ಪ ದೇವೂರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗುಲ್ಜಾನ್‌ ಬೇಗಂ ಸೇರಿದಂತೆ ಅಂಗನವಾಡಿ- ಆಶಾ ಕಾರ್ಯಕರ್ತೆಯರು ಇದ್ದರು. ಗುರುರಾಜ ಕುಲಕರ್ಣಿ ನಿರೂಪಿಸಿದರು. ವಿಜಯಾಚಾರ್ಯ ಪುರೋಹಿತ ಸ್ವಾಗತಿಸಿದರು. ದುರ್ಗಾಪ್ರಸಾದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next