ಕೆಂಭಾವಿ: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಪಟ್ಟಣ ಸೇರಿದಂತೆ ವಲಯದ ಹಲವು ಗ್ರಾಮಗಳಲ್ಲಿ ಬೆಂಬಲ ವ್ಯಕ್ತವಾಯಿತು. ಪಟ್ಟಣದಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೂ ಅಂಗಡಿಗಳು, ಮಾಲ್‌ಗಳು, ಮದ್ಯದಂಗಡಿಗಳು, ಲಾಡ್ಜ್ಗಳು, ಫುಟ್‌ಪಾತ್ ವ್ಯಾಪಾರಿಗಳು, ಆಟೋ ಮೊಬೈಲ್, ಗ್ಯಾರೇಜ್, ಖಾಸಗಿ ವಾಹನಗಳು ಸೇರಿದಂತೆ ಎಲ್ಲ ರೀತಿ ಸೇವೆ ಸ್ಥಗಿತಗೊಳಿಸುವ ಮೂಲಕ ಪ್ರಧಾನಿ ಕರೆ ನೀಡಿದ್ದ ಕರ್ಫ್ಯೂಗೆ ಜನರು ಸಂಪೂರ್ಣ ಬೆಂಬಲ ಸೂಚಿಸಿದರು.
ಉತ್ತರಾದಿ ಮಠದ ಯತಿಚತುಷ್ಠಯರ ವೃಂದಾವನ, ಹಿರೇಮಠದ ಗದ್ದುಗೆ, ಭೊಗೇಶ್ವರ ದೇವಸ್ಥಾನ, ಬಜಾರ್ ಬಲಭೀಮಸೇನ ದೇವಸ್ಥಾನ, ಶರಣಬಸವೇಶ್ವರ, ರೇವಣಸಿದ್ದೇಶ್ವರ, ಸಿದ್ದೇಶ್ವರ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನಗಳಲ್ಲಿ ಅರ್ಚಕರು ಬೆಳಗ್ಗೆ ಬೇಗ ಪೂಜೆ ನೆರವೇರಿಸಿ 7 ಗಂಟೆಯಿಂದ ದೇವಸ್ಥಾನಕ್ಕೆ ಬೀಗ ಹಾಕುವ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ ನೀಡಿದರು.
ಹಜರತ್ ಚಚ್ಚಾ ಮಾಸಾಬಿ ದರ್ಗಾ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಬೇಗ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಬೆಂಬಲ ಸೂಚಿಸಿದರು. ದಿನನಿತ್ಯ ಸದಾ ವಾಹನಗಳಿಂದ ಜುಣುಗುಡುತ್ತಿದ್ದ ಉತ್ತರಾದಿ ಮಠದ ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸದೆ ಭಣಗುಡುತ್ತಿತ್ತು. ಮುಖ್ಯ ಬಜಾರ್, ಡಾ| ಅಂಬೇಡ್ಕರ್ ವೃತ್ತ, ಹಳೆ ಬಸ್ ನಿಲ್ದಾಣ, ಎಸ್‌ಬಿಐ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಹನುಮಾನ ಚೌಕ್, ಟಿಪ್ಪು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಹಲವು ಭಾಗಗಳ ರಸ್ತೆಗಳು ಜನರಿಲ್ಲದೆ ಭಣಗುಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪೊಲೀಸರು ಯಾವುದೇ ಒತ್ತಡ ಹೇರದೆ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಗ್ರಾಪಂ ಕೇಂದ್ರ ಸ್ಥಾನಗಳಾದ ಯಕ್ತಾಪುರ, ಯಾಳಗಿ, ಮಲ್ಲಾ, ಏವೂರ, ಮಾಲಗತ್ತಿ, ಕಿರದಳ್ಳಿ, ಹೆಗ್ಗನದೊಡ್ಡಿ, ಕರಡಕಲ್, ನಗನೂರ, ಮುದನೂರ, ಬೈಚಬಾಳ ಗ್ರಾಮಗಳಲ್ಲಿಯೂ ಜನತೆ ಮನೆಯಿಂದ ಹೊರಗೆ ಬಾರದೆ ಜನತಾ ಕರ್ಫ್ಯೂಗೆ ತಮ್ಮ ಬೆಂಬಲ ಸೂಚಿಸಿದರು.