Advertisement

ಭತ್ತದ ಮೇವು ಮಾರಾಟ

12:33 PM Dec 25, 2019 | Naveen |

„ಗುಂಡಭಟ್ಟ ಜೋಷಿ
ಕೆಂಭಾವಿ:
ಜಿಲ್ಲೆಯಲ್ಲಿ ಮೇವಿನ ಕೊರತೆ ಆಗಬಾರದು ಎಂಬ ಉದ್ದೇಶದಿಂದ ರೈತರು ಭತ್ತದ ಮೇವನ್ನು ಸುಡಬಾರದು ಎಂದು ಜಿಲ್ಲಾಧಿಕಾರಿಗಳು ಪ್ರತಿ ಬಾರಿ ಆದೇಶ ನೀಡುತ್ತಾರೆ. ಆದರೆ ಇದಕ್ಕೆ ಅಪವಾದ ಎಂಬಂತೆ ಕೆಂಭಾವಿ ವಲಯದಿಂದ ಭತ್ತದ ಮೇವನ್ನು ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡಲಾಗುತ್ತಿದೆ.

Advertisement

ಈಗಾಗಲೇ ಭತ್ತದ ರಾಶಿ ಪ್ರಾರಂಭವಾಗಿದೆ. ನಾ ಮುಂದು ತಾ ಮುಂದು ಎಂದು ಹೊರ ಜಿಲ್ಲೆಗಳ ಜನರು ನೂರಾರು ವಾಹನಗಳಲ್ಲಿ ಭತ್ತದ ಮೇವನ್ನು ತುಂಬಿಸಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ದನಗಳಿಗೆ ಮೇವಿನ ಕೊರತೆ ಎದುರಾಗಿತ್ತು. ಇದನ್ನು ಮನಗಂಡ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಗಳಿಗೆ ಮೇವು ಸಾಗಿಸದಂತೆ ಕಟ್ಟಪ್ಪಣೆ ಹೊರಡಿಸಿದೆ. ಕೆಂಭಾವಿ ವಲಯದಲ್ಲಿ ಅರ್ಧ ಭಾಗ ನೀರಾವರಿ ಪ್ರದೇಶಕ್ಕೆ ಒಳಪಟ್ಟಿದ್ದರೆ, ಇನ್ನರ್ಧ ಭಾಗ ಒಣ ಬೇಸಾಯ ಪದ್ಧತಿಯಿಂದ ಮಳೆ ಅವಲಂಬಿಸಿ ರೈತರು ಬಿತ್ತನೆ ಮಾಡುತ್ತಾರೆ. ಒಣಬೇಸಾಯ ಪದ್ಧತಿ ಅಳವಡಿಸಿಕೊಂಡಿರುವ ರೈತರು ತಮ್ಮ ರಾಸುಗಳ ಹಸಿವು ನೀಗಿಸಲು ಭತ್ತದ ಮೇವಿನ ಕಡೆ ಚಿತ್ತ ನೆಟ್ಟಿದ್ದಾರೆ. ಬಳ್ಳಾರಿ, ರಾಯಚೂರು, ವಿಜಯಪುರ, ಬಾಗಲಕೋಟೆ ಜಿಲ್ಲೆ ಅಲ್ಲದೆ ಮಹಾರಾಷ್ಟ್ರ, ಆಂಧ್ರ ರಾಜ್ಯಗಳಿಂದಲೂ ಜನರು ಬಂದು ಟ್ರ್ಯಾಕ್ಟರ್‌, ಲಾರಿ ಸೇರಿದಂತೆ ಇನ್ನಿತರೆ ವಾಹನಗಳಲ್ಲಿ ಭತ್ತದ ಮೇವನ್ನು ತಗೆದುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ತಡೆ ಹಿಡಿಯುವ ಪ್ರಯತ್ನ ಜಿಲ್ಲಾಡಳಿತ ಮಾಡುವುದಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.

ರೈತರು ಪ್ರತಿ ಬಾರಿ ಭತ್ತದ ಮೇವನ್ನು ಉಚಿತವಾಗಿ ನೀಡುತ್ತಿದ್ದರು. ಆದರೆ ಈ ಬಾರಿ ಬೇರೆ ಜಿಲ್ಲೆಗಳಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಪ್ರತಿ ಒಂದು ಲೋಡ್‌ ಗೆ ಇಂತಿಷ್ಟು ನಿಗದಿ ಮಾಡಿ ಆ ಭಾಗದ ರೈತರಿಂದ ಹಣ ಪಡೆಯುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಕೆಂಭಾವಿ-ಸುರಪುರ, ಕೆಂಭಾವಿ- ಹುಣಸಗಿ, ಕೆಂಭಾವಿ-ಮಲ್ಲಾ ರಸ್ತೆಗಳಲ್ಲಿ ಈಗಾಗಲೇ ಭತ್ತದ ರಾಶಿ ನಡೆದಿದೆ.

ಭತ್ತದ ಗದ್ದೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ. ಒಟ್ಟಾರೆ ಮುಂಬರುವ ಬೇಸಿಗೆ ದಿನಗಳಲ್ಲಿ ದನಕರುಗಳಿಗೆ ಮೇವಿನ ಕೊರತೆ ಆಗದ ರೀತಿಯಲ್ಲಿ ಜಿಲ್ಲಾಡಳಿತ ಯಾವ ರೀತಿ ಕ್ರಮ ಕೈಗೊಳ್ಳುವುದು ಕಾದು ನೋಡಬೇಕು.

ತಾಲೂಕಿನಲ್ಲಿ ಮುಂಬರುವ ದಿನಗಳಲ್ಲಿ ದನಕರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ನೀಗಿಸಲು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ಯಾವ ಕಾರಣಕ್ಕೂ ನಮ್ಮ ತಾಲೂಕಿನ ಮೇವು ಬೇರೆ ಜಿಲ್ಲೆಗೆ ಹೋಗದಂತೆ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಗಡಿಯಲ್ಲಿ ಗಸ್ತು ನೇಮಿಸಲಾಗುವುದು. ಅವಶ್ಯ ಬಿದ್ದರೆ ಪೊಲೀಸ್‌ ಇಲಾಖೆ ಸಹಾಯ ಪಡೆಯಲಾಗುವುದು.
ನಿಂಗಣ್ಣ ಬಿರಾದಾರ,
ತಹಶೀಲ್ದಾರ್‌ ಸುರಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next