Advertisement

Keladi ಪಚ್ಚೆಲಿಂಗ ದರ್ಶನ; ವಿಜಯದ ಸಂಕೇತ: ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮಿ

06:22 PM Oct 24, 2023 | Vishnudas Patil |

ಸಾಗರ: ಕೆಳದಿ ಅರಸರು ಶ್ರೀಮಠಕ್ಕೆ ನೀಡಿರುವ ಅತ್ಯಂತ ಶ್ರೇಷ್ಠ ಪಚ್ಚೆಲಿಂಗ ದರ್ಶನದಿಂದ ಸನ್ಮಂಗಲವುಂಟಾಗುತ್ತದೆ. ಇದನ್ನು ದರ್ಶಿಸುವ ಭಕ್ತರ ಬದುಕು ಹಸನಾಗುತ್ತದೆ. ಪಚ್ಚೆಲಿಂಗ ದರ್ಶನ ವಿಜಯದಶಮಿಯಲ್ಲಿ ವಿಜಯದ ಸಂಕೇತವಾಗಿರುತ್ತದೆ ಎಂದು ಕೆಳದಿ ರಾಜಗುರು ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

Advertisement

ತಾಲೂಕಿನ ಕೆಳದಿ ರಾಜಗುರು ಹಿರೇಮಠದಲ್ಲಿ ಮಂಗಳವಾರ ಶರನ್ನವರಾತ್ರಿ ಶಕ್ತಿ ಮಹಾಪೂಜೆ ಹಾಗೂ ಪಚ್ಚೆಲಿಂಗ ದರ್ಶನಕ್ಕೆ ಚಾಲನೆ ನೀಡಿ ಶ್ರೀಗಳು ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ, ಕೆಳದಿ ಅರಸರು ಹಿರೇಮಠದ ಬಗ್ಗೆ ವಿಶೇಷ ಗೌರವಾಧಾರಗಳನ್ನು ಹೊಂದಿದ್ದರು. ಶ್ರೀಮಠದ ಪರಂಪರೆ ನಿರಂತರತೆ ಕಾಯ್ದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಬೆಲೆಬಾಳುವ ಪಚ್ಚೆಲಿಂಗವನ್ನು ನೀಡಿ ಅದರ ದರ್ಶನ ಸಾರ್ವಜನಿಕರಿಗೆ ಆಗಬೇಕು ಎನ್ನುವ ಸಂಕಲ್ಪ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ವಿಜಯದಶಮಿಯಂದು ಶ್ರೀಮಠದಲ್ಲಿ ಪಚ್ಚೆಲಿಂಗ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ತಮಗಾಗಿ ಏನನ್ನೂ ಬಯಸದ ಗುರು ಭಕ್ತರಿಗೆ ಸಮೃದ್ಧಿ ಜೀವನ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದು ಭಾರತೀಯ ಪರಂಪರೆಯಲ್ಲಿ ಮಾತ್ರ ಕಾಣಸಿಗುತ್ತದೆ. ಕೆಳದಿ ಮಠದಲ್ಲಿ ನವರಾತ್ರಿ ಸಂದರ್ಭದಲ್ಲಿ ಪ್ರತಿದಿನವೂ ಒಂದೊಂದು ಹೋಮ ಹವನಾದಿಗಳನ್ನು ನಡೆಸಿ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥನೆ ಮಾಡಲಾಗುತ್ತದೆ. ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ಸಾಕಷ್ಟು ತೊಂದರೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೆಳದಿ ಮಠದ ಶ್ರೀ ಚೌಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರೇಕೊಳ ಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಹಾರಾಷ್ಟ್ರ ನಾಂದೇಡ ಮಠದ ನೀಲಕಂಠ ಲಿಂಗ ಶಿವಾಚಾರ್ಯ ಸ್ವಾಮಿಗಳು, ಉತ್ಸವ ಸಮಿತಿಯ ಅನಿಲಕುಮಾರ್ ಬರದವಳ್ಳಿ, ವಿರೂಪಾಕ್ಷ ಸಾಗರ, ಗುರು ಕಾಗೋಡು, ಶೇಖರಪ್ಪ ಗೌಡ ಬೇಸೂರು, ಎಂ.ಎಸ್.ಗೌಡರ್, ಚಂದ್ರಶೇಖರ್ ಇನ್ನಿತರರು ಹಾಜರಿದ್ದರು. ಇತಿಹಾಸ ಪ್ರಸಿದ್ದವಾದ ಪಚ್ಚೆಲಿಂಗವನ್ನು ಸಾವಿರಾರು ಜನರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next