Advertisement

Kejriwal ರಾಜೀನಾಮೆ ನೀಡುವುದಿಲ್ಲ ಜೈಲಿನಿಂದಲೇ ಆಡಳಿತ; ಏನಿದು ದಿಲ್ಲಿ ಅಬಕಾರಿ ನೀತಿ ಹಗರಣ?

12:43 AM Mar 22, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿದ್ದ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ರಕ್ಷಣೆ ನೀಡಲು ಹೈಕೋರ್ಟ್‌ ಗುರುವಾರ ನಿರಾ ಕರಿಸಿತು. ಕೋರ್ಟ್‌ ಈ ಆದೇಶ ನೀಡಿದ ಕೆಲವು ಗಂಟೆಗಳ ಬಳಿಕ, ಇ.ಡಿ. ಅವರನ್ನು ಬಂಧಿಸಿತು!

Advertisement

ರಕ್ಷಣೆ ಕೋರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್‌ನ ನ್ಯಾ.ಸುರೇಶ್‌ ಕುಮಾರ್‌ ಕೈತ್‌ ಮತ್ತು ಮನೋಜ್‌ ಜೈನ್‌ ಅವರಿದ್ದ ಪೀಠವು, ನಾವು ಎರಡು ಕಡೆಯ ವಾದ ಆಲಿಸಿದ್ದೇವೆ. ಈ ಹಂತದಲ್ಲಿ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿತು.

ವಿಚಾರಣೆ ವೇಳೆ ಕೇಜ್ರಿವಾಲ್‌ ಪರ ವಕೀಲ ಅಭಿಷೇಕ್‌ ಮನು ಸಿಂಘವಿ , ಗುರುವಾರ ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೀಡಿರುವ ನೋಟಿಸ್‌ ಮುಂದೂಡುವಂತೆ ಕೇಳಿಕೊಂಡರು. ಆಗ, ಇ.ಡಿ ಪರವಾಗಿ ವಿಚಾರಣೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು, ಈಗ ಎಲ್ಲ ಮುಗಿದಾಗಿದೆ. ಅವರು (ಕೇಜ್ರಿವಾಲ್‌) ಹಾಜರಾಗುವುದಿಲ್ಲ

ಎಂದು ಪೀಠಕ್ಕೆ ತಿಳಿಸಿದರು. ಅಂತಿಮವಾಗಿ ಹೈಕೋರ್ಟ್‌, ಕೇಜ್ರಿವಾಲ್‌ಗೆ ರಕ್ಷಣೆಯನ್ನು ನಿರಾಕರಿಸಿತು.
ಕೇಜ್ರಿವಾಲ್‌ ಪರ ವಕೀಲರ ವಾದವೇನು?: ಕೇಜ್ರಿವಾಲ್‌ ಪರ ವಾದ ಮಂಡಿಸಿದ ಸಿಂ Ì ಅವರು, ಚುನಾವಣೆ ಹತ್ತಿರ ಇರುವಾಗ ಇ.ಡಿ ನಡೆದುಕೊಳ್ಳುತ್ತಿರುವ ರೀತಿ ಸೂಕ್ತವಾಗಿಲ್ಲ. ಕೇಜ್ರಿವಾಲ್‌ ಭೌತಿಕವಾಗಿ ವಿಚಾರಣೆಗೆ ಏಕೆ ಹಾಜರಾಗಬೇಕು ಎಂಬ ಕಾರಣವನ್ನು ಸಮನ್ಸ್‌ನಲ್ಲಿ ತಿಳಿಸಿಲ್ಲ. ಬಂಧಿಸುವ ಅಧಿಕಾರ ಇದೆ ಎಂಬ ಮಾತ್ರಕ್ಕೆ ಇ.ಡಿ ಮನಸೋಚ್ಛೆ ವರ್ತಿಸುವಂತಿಲ್ಲ ಎಂದು ಹೇಳಿದರು.

ಇ.ಡಿ. ಪರ ವಕೀಲರ ವಾದವೇನು

Advertisement

ಅರವಿಂದ್‌ ಕೇಜ್ರಿವಾಲ್‌ ಮುಖ್ಯಮಂತ್ರಿಯಾಗಿ ವಿಚಾರಣೆಗೆ ಹಾಜರಾಗದೆ, ವೈಯಕ್ತಿಕ ನೆಲೆಯಲ್ಲಿ ಹಾಜರಾಗು ವಂತೆ ಇ.ಡಿ. ತಿಳಿಸಿದೆ. ಅಕ್ರಮ ಹಣ ವರ್ಗಾ ವಣೆಗೆ ಸಂಬಂಧಿಸಿದಂತೆ ವಿಚಾರಣೆ ಬೇಕಾಗಿರುವ ಅಗತ್ಯ ಪುರಾವೆಗಳಿವೆ. ನಾವು ಅವರನ್ನು ಬಂಧನಕ್ಕೆ ಕರೆಯುತ್ತಿದ್ದೇವೆ ಎಂದು ಹೇಳಿಲ್ಲ. ವಿಚಾರಣೆಗಷ್ಟೇ ಕರೆಯುತ್ತಿದ್ದೇವೆ. ಆಗ ಅವರನ್ನು ಬಂಧಿಸಬಹುದು. ಇಲ್ಲವೇ ಬಂಧಿಸದಿರಬಹುದು ಎಂದು ಇ.ಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ರಾಜು ತಿಳಿಸಿದರು.

ಏನಿದು ದಿಲ್ಲಿ ಅಬಕಾರಿ ನೀತಿ ಹಗರಣ?
ಅಬಕಾರಿ ವಲಯದ ಸುಧಾರಣೆಗಾಗಿ ದಿಲ್ಲಿಯ ಆಪ್‌ ಸರ್ಕಾರವು 2021ರಲ್ಲಿ ದಿಲ್ಲಿ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಈ ನೀತಿ ಅನ್ವಯ ಖಾಸಗಿ ಕಂಪನಿಗಳು ಮತ್ತು ಉದ್ಯಮಗಳಿಗೆ ಚಿಲ್ಲರೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ, ಸರ್ಕಾರವು ತನ್ನ ಪರವಾಗಿರುವ ಕಂಪನಿಗಳು, ಉದ್ಯಮಗಳ ಮಾಲೀಕರಿಗೆ ನೆರವು ನೀಡುತ್ತಿದೆ. ಜತೆಗೆ, ಲಂಚ ಪಡೆದು ಹೊಸಬರಿಗೆ ಪರವಾನಿಗೆ ನೀಡಲಾಗಿದೆ ಎಂಬ ವ್ಯಾಪಕ ಆರೋಪ ಕೇಳಿ ಬಂತು. ಅಬಕಾರಿ ನೀತಿಯ ಮೂಲಕ ಭ್ರಷ್ಟಾಚಾರ ಎಸಗಲಾಗಿದೆ ಎಂಬ ಆರೋಪ ಪ್ರತಿಪಕ್ಷಗಳಿಂದ ಜೋರಾಗುತ್ತಿದ್ದಂತೆ, ದಿಲ್ಲಿಯ ಲೆಫ್ಟಿನೆಂಟ್‌ ಗವರ್ನರ್‌ ಸಿಬಿಐ ತನಿಖೆಗೆ ಆದೇಶಿಸಿದರು. ಇ.ಡಿ ಕೂಡ ವಿಚಾರಣೆಗಿಳಿಯತು. 2022ರಲ್ಲಿ ನೀತಿಯನ್ನು ರದ್ದು ಕೂಡ ಮಾಡ ಲಾಯಿತು. ಇ.ಡಿ. ಪ್ರಕಾರ, ಈ ಹಗರಣ ದಿಂದ ದಿಲ್ಲಿ ಸರ್ಕಾರಕ್ಕೆ 2631 ಕೋಟಿ ರೂ. ನಷ್ಟವಾಗಿದೆ.

ಹಗರಣದಲ್ಲಿ ಇ.ಡಿ. ಬಂಧಿಸಿದ ಪ್ರಮುಖ ನಾಯಕರು
ದಿಲ್ಲಿ ಡಿಸಿಎಂ ಆಗಿದ್ದ ಮನೀಶ್‌ ಸಿಸೋಡಿಯಾ, ಆಪ್‌ ನಾಯಕ ಸಂಜಯ್‌ ಸಿಂಗ್‌, ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕೆ.ಕವಿತಾ ಮತ್ತು ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌. ಅರಬಿಂದೋ ಫಾರ್ಮಾ ಡೈರೆಕ್ಟರ್‌ ಪಿ ಶರತ್‌ ಚಂದ್ರ ರೆಡ್ಡಿ ಹಾಗೂ ಮತ್ತಿತರರು.

ಜೈಲಿನಿಂದಲೇ ಆಡಳಿತ
ಬಂಧನದ ಬಳಿಕವೂ ಅರವಿಂದ್‌ ಕೇಜ್ರಿವಾಲ್‌ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ದ್ದಾರೆ ಮತ್ತು ಜೈಲಿನಿಂದಲೇ ಸರ್ಕಾರ ನಡೆಸಲಿದ್ದಾರೆ ಎಂದು ದಿಲ್ಲಿ ಸಚಿವೆ ಆತಿಶಿ ಹೇಳಿದ್ದಾರೆ. ಜೈಲಿನಿಂದಲೇ ಆಡಳಿತ ನಡೆಸುವುದನ್ನು ತಪ್ಪಿಸುವ ಯಾವುದೇ ನಿಯಮಗಳಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮೊದಲು ದಿಲ್ಲಿ ಸ್ಪೀಕರ್‌ ರಾಮ್‌ ನಿವಾಸ್‌ ಗೋಯಲ್‌ ಕೂಡ ಅರವಿಂದ್‌ ಕೇಜ್ರಿವಾಲ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಜೈಲಿನಿಂದಲೇ ದೆಹಲಿ ಸರ್ಕಾರ ನಡೆಸಲಿದ್ದಾರೆ ಎಂದು ಹೇಳಿದ್ದರು.

ಕೇಜ್ರಿ ಏಕೆ ವಿಚಾರಣೆ ಹೋಗಲಿಲ್ಲ?

ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಪ್ರತಿ ಸಮನ್ಸ್‌ ನೀಡಿದಾಗಲೂ ಇದು ಅಕ್ರಮ ಎಂದು ಕಾರಣ ನೀಡಿ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ. ಕೊನೆಗೆ, ಈ ಕುರಿತು ಇ.ಡಿ. ದಿಲ್ಲಿ ನ್ಯಾಯಾಲ ಯದಲ್ಲಿ ಎರಡು ದೂರು ದಾಖಲಿಸಿತ್ತು. ಇದಕ್ಕೆ ಕೇಜ್ರಿವಾಲ್‌ ಜಾಮೀನು ಪಡೆದಿದ್ದರು.

ದಿನವಿಡೀ ಏನಾಯಿತು?
ಬಂಧನದಿಂದ ರಕ್ಷಣೆ ಕೋರಿ ದಿಲ್ಲಿ
ಹೈಕೋರ್ಟ್‌ಗೆ ಕೇಜ್ರಿವಾಲ್‌ ಮೊರೆ
ಮಧ್ಯಂತರ ರಕ್ಷಣೆಗೆ ಹೈಕೋರ್ಟ್‌ ನಕಾರ
ಕೇಜ್ರಿವಾಲ್‌ ನಿವಾಸಕ್ಕೆ ಇ.ಡಿ. ದಾಳಿ
ಸರ್ಚ್‌ ವಾರೆಂಟ್‌ನೊಂದಿಗೆ ಅಧಿಕಾರಿಗಳ ಶೋಧ
ಕೇಜ್ರಿವಾಲ್‌ ನಿವಾಸದ ಹೊರಗೆ ಬಿಗಿ ಪೊಲೀಸ್‌ ಬಂದೋಬಸ್ತ್
ಸುಪ್ರೀಂಗೆ ಮೊರೆ ಹೋಗಲು ಕೇಜ್ರಿವಾಲ್‌ ಕಾನೂನು ತಂಡ ನಿರ್ಧಾರ. ತುರ್ತು ವಿಚಾರಣೆಗೆ ಸುಪ್ರೀಂಗೆ ಮನವಿ
ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ
ಸುಮಾರು 2 ಗಂಟೆ ಕಾಲ ಕೇಜ್ರಿವಾಲ್‌ ವಿಚಾರಣೆ
ಕೇಜ್ರಿವಾಲ್‌ ನಿವಾಸದ ಎದುರು ಆಪ್‌ ಕಾರ್ಯಕರ್ತರ ಪ್ರತಿಭಟನೆ
ವಿಚಾರಣೆ ನಂತರ ಕೇಜ್ರಿವಾಲ್‌ ಅವರನ್ನು ಬಂಧಿಸಿದ ಇಡಿ ಅಧಿಕಾರಿಗಳು
ಕೇಜ್ರಿವಾಲ್‌ ನಿವಾಸದ ಎದುರು ಹೈಡ್ರಾಮ. ಪ್ರತಿಭಟನಾನಿರತ ಆಪ್‌ ಕಾರ್ಯಕರ್ತರ ಬಂಧನ
ದಿಲ್ಲಿ ಇ.ಡಿ. ಕಚೇರಿಗೆ ಕೇಜ್ರಿವಾಲ್‌ ಅವರನ್ನು ಕರೆದೊಯ್ದ ಇಡಿ ಅಧಿಕಾರಿಗಳು

ದಿಲ್ಲಿ ಅಬಕಾರಿ ಪ್ರಕರಣದ ಟೈಮ್‌ಲೈನ್‌
2021 ನವೆಂಬರ್‌: ಅಬಕಾರಿ ನೀತಿ ಜಾರಿ
2022 ಜು.8: ಅಬಕಾರಿ ನೀತಿಯಲ್ಲಿ ಅಕ್ರಮ ಸಿಎಸ್‌ ವರದಿ ಸಲ್ಲಿಕೆ
2022 ಜು.22: ಸಿಬಿಐ ತನಿಖೆಗೆ ಉಪರಾಜ್ಯಪಾಲ ಆದೇಶ
2022 ಆ.19: ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ
2022 ಆ.22: ಇ.ಡಿ.ಯಿಂದ ಅಕ್ರಮ ಹಣ ವರ್ಗಾವಣೆ ಕೇಸ್‌
2022 ಸೆಪ್ಟಂಬರ್‌: ಆಪ್‌ನ ಸಂವಹನಾ ಮುಖ್ಯಸ್ಥ ವಿಜಯ್‌ ನಾಯರ್‌ ಬಂಧನ
2023 ಮಾರ್ಚ್‌: ಡಿಸಿಎಂ ಮನೀಶ್‌ ಸಿಸೋಡಿಯಾ ಬಂಧನ
2023 ಅಕ್ಟೋಬರ್‌: ಆಪ್‌ ನಾಯಕ ಸಂಜಯ್‌ ಸಿಂಗ್‌ ಸೆರೆ
2023 ಅಕ್ಟೋಬರ್‌: ಕೇಜ್ರಿವಾಲ್‌ಗೆ ಮೊದಲ ಸಮನ್ಸ್‌
2024 ಮಾ.16: ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಬಂಧನ
2024 ಮಾ.21: ದಿಲ್ಲಿ ಸಿಎಂ ಕೇಜ್ರಿವಾಲ್‌ ಬಂಧನ

ದಿಲ್ಲಿಯಲ್ಲಿ ಕೇಜ್ರಿವಾಲ್‌ ಬೆಂಬಲಿಗರ ಹೈಡ್ರಾಮ
ಕೇಜ್ರಿವಾಲ್‌ ನಿವಾಸದ ಎದುರು ಕೇಜ್ರಿವಾಲ್‌ ಬೆಂಬಲಿಗರು, ಆಪ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತ ಆಪ್‌ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಹಲವು ಆಪ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಅಲ್ಲದೇ ಆಪ್‌ ಶಾಸಕ ರಾಖೀ ಬಿರ್ಲಾ ಅವರನ್ನು ಕೂಡ ಪೊಲೀಸರು ಬಂಧಿಸಿದರು. ಈ ವೇಳೆ ಸ್ಥಳದಲ್ಲಿ ಹೈಡ್ರಾಮ ಸೃಷ್ಟಿಯಾಗಿತ್ತು.

ಒಬ್ಬ ಹೆದರಿದ ಸರ್ವಾಧಿಕಾರಿ ಸತ್ತ ಪ್ರಜಾಪ್ರಭುತ್ವವನ್ನು ರಚಿಸಲು ಬಯಸುತ್ತಾನೆ. ಪಕ್ಷಗಳನ್ನು ಒಡೆಯುವುದು, ಕಂಪನಿಯಿಂದ ಹಣ ವಸೂಲಿ, ಪ್ರಮುಖ ವಿಪಕ್ಷದ ಖಾತೆ ಸ್ಥಗಿತಗೊಳಿಸುವುದು “ಪಿಶಾಚಿ ಶಕ್ತಿ’ಗೆ ಸಾಕಾಗಿಲ್ಲ. ಇದೀಗ ಚುನಾಯಿತ ಮುಖ್ಯಮಂತ್ರಿಯ ಬಂಧನವಾಗಿದೆ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಕೇಜ್ರಿಗೆ ಹಿಂದಿನ ಸಮನ್ಸ್‌
2023
1. ನ.23
2. ಡಿ.23

2024
3. ಜ.3
4. ಜ.18
5. ಫೆ.2
6. ಫೆ.19
7. ಫೆ.26
8. ಮಾ. 4
9. 21

Advertisement

Udayavani is now on Telegram. Click here to join our channel and stay updated with the latest news.

Next