Advertisement

ಅತ್ಯುತ್ತಮ ಕೆರೆ ಪ್ರಶಸ್ತಿ ಮೇಲೆ ಪಾಲಿಕೆ ಕಣ್ಣು

10:45 AM Nov 20, 2019 | Suhan S |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಕಡೆ ಕೆರೆ ಏರಿ, ಮತ್ತೂಂದು ಕಡೆ ಕೋಡಿ ಒಡೆದು ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು “ಜಾಗರಣೆ’ ಮಾಡುವ ಪರಿಸ್ಥಿತಿ ನಿರ್ಮಾಣ  ವಾಗುತ್ತಿರುವ ಬೆನ್ನಲ್ಲೇ, ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿನ “ಅತ್ಯುತ್ತಮ’ ಕೆರೆಯೊಂದನ್ನು ಪ್ರಧಾನ ಮಂತ್ರಿಗಳ ಎಕ್ಸ್‌ಲೆನ್ಸ್‌ ಇನ್‌ ಪಬ್ಲಿಕ್‌ ಅಡ್ಮಿನಿಸ್ಟ್ರೇಷನ್‌ ಪ್ರಶಸ್ತಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

Advertisement

ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆಗೆ ಕೆರೆಗಳ ಸಮೀಕ್ಷೆ ಮತ್ತು ದಾಖಲೆಗಳನ್ನು ಸಲ್ಲಿಸುವ ಜವಾಬ್ದಾರಿ  ಯನ್ನು ಪಾಲಿಕೆ ಅಧಿಕಾರಿಗಳು ನೀಡಿದ್ದಾರೆ. ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮತ್ತು ಬದಲಾವಣೆ ಮಾಡಿರುವುದನ್ನು ಗುರುತಿಸಿ, ಎಕ್ಸ್‌ಲೆನ್ಸ್‌ ಇನ್‌ ಪಬ್ಲಿಕ್‌ ಅಡ್ಮಿನಿಸ್ಟ್ರೇಷನ್‌ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗೆ ಬಿಬಿಎಂಪಿ ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದು, ಪ್ರಶಸ್ತಿ ಪಡೆಯುವ ನಿರೀಕ್ಷೆಯಲ್ಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆಗಳ ನಿರ್ವಹಣೆಗೆಂದೇ 2019-20ನೇ ಸಾಲಿನಲ್ಲಿ 25 ಕೋಟಿ ರೂ. ಅನುದಾನ ಮೀಸಲಿರಿಸಿತ್ತು. ಈ ಪ್ರಮಾಣದ ಭಾರೀ ಮೊತ್ತದ ಅನುದಾನ ಮೀಸಲಿರಿಸಿದ ಹೊರತಾಗಿಯೂ, ಬಿಬಿಎಂಪಿ ಕೆರೆಗಳ ನಿರ್ವಹಣೆ ಮಾಡುವಲ್ಲಿ ಹಾಗೂ ಒತ್ತುವರಿ ತಡೆಯುವಲ್ಲಿ ವಿಫ‌ಲವಾಗುತ್ತಿದೆ ಎಂದು ಕೋರ್ಟ್‌ ಚಾಟಿ ಬೀಸುತ್ತಲೇ ಇದೆ. ಕೆರೆ ನಿರ್ವಹಣೆಯಲ್ಲಿ ಈ ಹಿಂದಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕೆಲವು ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದೇವೆ ಎನ್ನುವುದು ಬಿಬಿಎಂಪಿ ಅಧಿಕಾರಿಗಳ ವಾದವಾಗಿದೆ.

ಸಂಪೂರ್ಣ ಅಭಿವೃದ್ಧಿಯಾಗಿರುವ ಕೆರೆಗಳ ಆಯ್ಕೆ: ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿ ಹೊಂದಿರುವ ಒಟ್ಟು12 ಕೆರೆಗಳಲ್ಲಿ ಒಂದು ಕೆರೆ ಆಯ್ಕೆಗೆ ಬಿಬಿಎಂಪಿ ಮುಂದಾಗಿದೆ. ಹೀಗಾಗಿ, 12 ಕೆರೆಗಳ ಸಮೀಕ್ಷೆ ನಡೆಯುತ್ತಿದ್ದು, ಇದರಲ್ಲಿ ಒಂದು ಕೆರೆಯನ್ನು ಪ್ರಶಸ್ತಿಗೆ ಕಳುಹಿಸುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 169 ಕೆರೆಗಳಿದ್ದು, ಇವುಗಳ ಪೈಕಿ 94 ಕೆರೆಗಳನ್ನು ಬಿಬಿಎಂಪಿ ಅಭಿವೃದ್ಧಿಪಡಿಸಿದೆ. 19 ಕೆರೆಗಳು ಅಭಿವೃದ್ಧಿ ಹಂತದಲ್ಲಿವೆ. ಇನ್ನೂ 37 ಕೆರೆ ಅಭಿವೃದ್ಧಿಪಡಿಸುವುದು ಬಾಕಿಯಿದೆ. ಇದರ ಹೊರತಾಗಿ 19 ಕೆರೆಗಳು ಒತ್ತುವರಿಯಾಗಿದ್ದು, ಈ ಕೆರೆಗಳ ಜಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಇನ್ನಿತರ ಉದ್ದೇಶಗಳಿಗಾಗಿ ಬಳಸಲಾಗಿದೆ.

ಆಯ್ಕೆಯಾಗಿರುವ ಕೆರೆಗಳು: ಪ್ರಶಸ್ತಿಗೆ ಆಯ್ಕೆಯಾಗಿರುವ  ಕೆರೆಗಳಲ್ಲಿ ಈಗ ಜಕ್ಕೂರು, ಯಲಹಂಕ, ಕಾಲೇನ ಅಗ್ರಹಾರ, ಕಲ್ಕೆರೆ, ಗರುಡಾ ಚಾರಪಾಳ್ಯ, ದೇವಿ ಬಿಸ್ತೇನಹಳ್ಳಿ, ಕೆಂಪಾಂಬುಧಿ ಕೆರೆ ಹಾಗೂ ಕೈಗೊಂಡನ ಹಳ್ಳಿ ಕೆರೆಗಳ ಸಮೀಕ್ಷೆ ನಡೆಸ ಲಾಗಿದೆ. ಇನ್ನು ಗೊಟ್ಟಿಗೆರೆ, ಹೂಡಿ, ಸಾರಕ್ಕಿ ಹಾಗೂ ಹೊರ ಮಾವು ಕೆರೆಗಳ ಸಮೀಕ್ಷೆ ಕೆಲಸ ಪ್ರಗತಿಯಲ್ಲಿದೆ. ಈ 12 ಕೆರೆಗಳಲ್ಲಿನ ನೀರಿನ ಗುಣಮಟ್ಟ, ಕೆರೆ ಸುತ್ತಲಿನ ವನ್ಯ ಜೀವಿಗಳು ಹೆಚ್ಚಾಗಿರುವುದು, ಪಾದಚಾರಿ ಮಾರ್ಗ ಹಾಗೂ ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ರುವ ಹಸಿರೀಕರಣವನ್ನೂ ಪ್ರಶಸ್ತಿ ಆಯ್ಕೆಗೆ ಪರಿಗಣಿ ಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕೆರೆಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿಲ್ಲ:  ಇತ್ತೀಚೆಗೆ ದೊಡ್ಡಬಿದರಕಲ್ಲು ಕೆರೆ ಕೊಡಿ ಮತ್ತು ಹೊಸಹಳ್ಳಿಕೆರೆ ಏರಿ ಒಡೆದಿದ್ದರ ನಡುವೆಯೇ ಪ್ರಧಾನ ಮಂತ್ರಿ ಪ್ರಶಸ್ತಿಗೆ ಅತ್ಯುತ್ತಮ ಕೆರೆಯೊಂದನ್ನು ಆಯ್ಕೆ ಮಾಡಲು ಹೊರಟಿರುವುದು ಎಷ್ಟು ಸಮಂಜಸ ? ಎಂವ ಪ್ರಶ್ನೆಗೆ ಬಿಬಿಎಂಪಿಯ ಕೆರೆ ವಿಭಾಗದ ಅಧಿಕಾರಿಗಳು, “ನಮ್ಮ ವ್ಯಾಪ್ತಿಯಲ್ಲಿನ ಕೆರೆಗಳ ಕೋಡಿ ಅಥವಾ ಏರಿ ಒಡೆದಿಲ್ಲ. ಸಮಸ್ಯೆ ಉಂಟಾಗಿರುವ ಕೆರೆಗಳು ಬಿಡಿಎ ವ್ಯಾಪ್ತಿಯಲ್ಲಿವೆ. ಈ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎನ್ನುತ್ತಾರೆ.

ದಾಖಲೆ ಸಿದ್ಧಪಡಿಸಿ, ಸಲ್ಲಿಸಲು 4.5 ಲಕ್ಷ:  ನಗರದ 12 ಕೆರೆಗಳಲ್ಲಿ ಒಂದು ಕೆರೆ ಆಯ್ಕೆಗೆ ಬಿಬಿಎಂಪಿ 4.5 ಲಕ್ಷರೂ. ಖರ್ಚು ಮಾಡುತ್ತಿದೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆಗೆ ಸಮೀಕ್ಷೆ ಮತ್ತು ದಾಖಲೆ ಸಲ್ಲಿಸುವ ಕೆಲಸಕ್ಕೆಂದೇ ಬಿಬಿಎಂಪಿ ಬರೋಬ್ಬರಿ 4.5 ಲಕ್ಷ ರೂ. ವ್ಯಯಿಸುತ್ತಿದೆ. ಪ್ರಧಾನ ಮಂತ್ರಿ ಪ್ರಶಸ್ತಿಗೆ ವಿವಿಧ ರಾಜ್ಯಗಳಿಂದಲೂ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಹಲವು ಮಹಾನಗರ ಪಾಲಿಕೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಬಿಬಿಎಂಪಿಯ ಕೆರೆಯೊಂದು ಆಯ್ಕೆಯಾದರೂ, ಪ್ರಶಸ್ತಿ ಹೊರತುಪಡಿಸಿ ಪ್ರೋತ್ಸಾಹ ಮೊತ್ತ ಸಿಗುವುದಿಲ್ಲ.

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next