Advertisement

ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಿ

07:09 AM Jan 07, 2019 | |

ದಾವಣಗೆರೆ: ತಂದೆ, ತಾಯಿಯನ್ನು ಗೌರವದಿಂದ ಕಾಣದೆ ಯಾರು ಸರಿಯಾಗಿ ನೋಡಿಕೊಳ್ಳುವುದಿಲ್ಲವೋ ಅಂತಹ ಮಕ್ಕಳು ಸಮಾಜಕ್ಕೆ ಮಾರಕ ಎಂದು ಕರ್ಕಿಯ ದೈವಜ್ಞ ಬ್ರಾಹ್ಮಣ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

Advertisement

ವಿನೋಬಾ ನಗರದ ಶ್ರೀಮತಿ ಗೌರಮ್ಮ ನರಹರಿ ಶೇಟ್‌ ಸಬಾಭವನದಲ್ಲಿ ಭಾನುವಾರ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ದೈವಜ್ಞ ಬಾಹ್ಮಣ ಮಹಿಳಾ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು
ಮಾತನಾಡಿದರು. 

ಭಾರತೀಯ ಭವ್ಯ ಸಂಸ್ಕೃತಿ, ಪರಂಪರೆಯಲ್ಲಿ ಹುಟ್ಟಿದ ಪ್ರತಿಯೊಬ್ಬರು ಕೂಡ ಪೋಷಕರನ್ನು ಗೌರವದಿಂದ ಕಾಣುವುದು, ಅವರ ಇಳಿ ವಯಸ್ಸಿನಲ್ಲಿ ಸಂತೋಷದಿಂದ ನೋಡಿಕೊಳ್ಳುವುದು ಮಾನವೀಯ ಧರ್ಮವಾಗಿದೆ. ಅದನ್ನು ಬಿಟ್ಟು ಪೋಷಕರನ್ನು ಅಗೌರವದಿಂದ ಕಾಣುತ್ತಾ ಹೋದರೆ ಅಂತಹವರು ಎಂತಹ ದೊಡ್ಡ ಹುದ್ದೆ ಪಡೆದರೂ ಕೂಡ ನಿರರ್ಥಕ. ಅವರು ಕುಟುಂಬಕ್ಕಷ್ಟೇ ಅಲ್ಲ, ಸಮಾಜಕ್ಕೂ ಮಾರಕ ಎಂದರು.

ಜಗತ್ತಿನಲ್ಲಿ ಪ್ರತಿಯೊಂದು ಒಳ್ಳೆಯ ಕಾರ್ಯದ ಹಿಂದೆ ಸೇವಾಮನೋಭಾವ ಹೊಂದಿದ ತಾಯಿಯ ಪಾತ್ರ ಹೆಚ್ಚಾಗಿರುತ್ತದೆ. ತಾಯಿಯಿಂದ ಮಾತ್ರ ನಿಸ್ವಾರ್ಥ ಪ್ರೀತಿ ಕೊಡಲು ಸಾಧ್ಯ. ದೇವತೆಗಳ ಊರು, ಗಿರಿ ದಾವಣಗೆರೆ. ತಾಯಿಯೇ ದೇವರು ಎಂದು ಪೂಜಿಸುವ ಊರು. ಇಂತಹ ಊರಲ್ಲಿ ದೇವತೆಗಳು ನೆಲೆಸಿವೆ ಎಂದು ಹೇಳಿದರು.

ಯಾವ ಮನೆಯಲ್ಲಿ ಶಾಂತಿ ಇಲ್ಲವೋ ಆ ಮನೆ ಸ್ಮಶಾನಕ್ಕೆ ಸಮ. ಶಾಂತಿ ಇದ್ದಲ್ಲಿ ಮಾತ್ರ ಸುಸಂಸ್ಕೃತ ವಾತಾವರಣ ನೆಲೆಸಲು ಸಾಧ್ಯ. ಯಾವ ಮನೆಯಲ್ಲಿ ಮಹಿಳೆಯನ್ನು ಹಿಂಸಿಸುತ್ತಾರೋ ಅಂತಹ ಮನೆಯಲ್ಲಿ ದಾರಿದ್ರ್ಯತನ ಹೆಚ್ಚಾಗುತ್ತದೆ ಎಂದರು. 

Advertisement

ಪ್ರತಿಯೊಬ್ಬರಿಗೂ ಕನಿಷ್ಠ ಶಿಕ್ಷಣ ದೊರೆಯುವಂತಾಗಬೇಕು. ಚಿಂತನಾ ಶಕ್ತಿ, ಧಾರ್ಮಿಕ ಭಾವನೆ, ಸೇವಾ ಮನೋಭಾವನೆ
ಬೆಳೆಸಿಕೊಳ್ಳಬೇಕು. ಸಮಾಜದ ಇತರರಿಗೆ ಮಾದರಿ ಆಗಬೇಕು. ಆಗ ಮಾತ್ರ ಸಮಾಜ ಏಳ್ಗೆ ಸಾಧಿಸಲು ಸಾಧ್ಯ ಎಂದು ಹೇಳಿದರು.

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ಸದಸ್ಯೆ ಹೇಮಲತಾ ಸತೀಶ್‌ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಜಾತಿ ಆಧಾರಿತವಾಗಿ ರಾಜಕೀಯ ಕ್ಷೇತ್ರ ಬೆಳೆದಿದೆ. ಇಂದು ಪ್ರತಿಯೊಂದು ಸಮಾಜವು ಕೂಡ ರಾಜಕೀಯವಾಗಿ ಅಭಿವೃದ್ಧಿ ಹೊಂದುತ್ತಿವೆ. ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಅಂತಹ ಸಮಾಜ ರಾಜಕೀಯವಾಗಿ ಪ್ರಬಲವಾಗಿರಬೇಕು. ಈ ಹಿನ್ನೆಲೆಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದವರು ಕೂಡ ಸಂಘಟಿತರಾಗಿ ರಾಜಕೀಯವಾಗಿಯೂ ಬೆಳೆಯಬೇಕು ಎಂದರು.

ದೈವಜ್ಞ ಬ್ರಾಹ್ಮಣ ಸಮಾಜವು ವಿಶ್ವಕರ್ಮ ಸಮಾಜದ ಮೀಸಲಾತಿ ವ್ಯಾಪ್ತಿಗೆ ಬರುವುದರಿಂದ ಸಾಕಷ್ಟು ಸೌಲಭ್ಯಗಳನ್ನು ನಿಗಮ ಮಂಡಳಿಯಿಂದ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಮಹಿಳೆಯರು ಸರ್ಕಾರದ ಮಟ್ಟದಲ್ಲಿನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೈವಜ್ಞ ಬ್ರಾಹ್ಮಣ ಸಮಾಜವು ಅತ್ಯಂತ ಬುದ್ಧಿವಂತ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಸಂಸ್ಕಾರವಂತ ಸಮಾಜವಾಗಿದೆ. ಜೀವನದಲ್ಲಿ ಕೊನೆತನಕ ಉಳಿಯುವುದೆಂದರೆ ಅದು ಜ್ಞಾನ ಮಾತ್ರ. ಹಾಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ಜ್ಞಾನವಂತರನ್ನಾಗಿ ಮಾಡಿ ಎಂದು ಸಲಹೆ ನೀಡಿದರು.

ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಮಾತನಾಡಿ, ಯಾವುದೇ ಕಾರ್ಯದ ಯಶಸ್ಸಿನ ಹಿಂದೆ ಒಗ್ಗಟ್ಟು ಬಹುಮುಖ್ಯ. ಅಂತಹ ಕೆಲಸವನ್ನು ದೈವಜ್ಞ ಬ್ರಾಹ್ಮಣ ಮಹಿಳಾ ಸಮಾಜ ಮಾಡುತ್ತಿದೆ. ಮಹಿಳೆಯರಿಗೆ ಯಾವ ಕುಟುಂಬದಲ್ಲಿ ಗೌರವ ಸಿಗುತ್ತದೆಯೋ ಆ ಕುಟುಂಬದಲ್ಲಿ ಆನಂದ, ಸಹಬಾಳ್ವೆ ನೆಲೆಸಿರುತ್ತದೆ. ಮಹಿಳೆ ಸಾಮಾಜಿಕವಾಗಿ ಅಭಿವೃದ್ಧಿಯಾದರೆ ದೇಶವೇ ಅಭಿವೃದ್ಧಿಯಾಗುತ್ತದೆ ಎಂದರು.

ಇಂದಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಮೊಬೈಲ್‌, ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಮುಳುಗಿ ಅಡ್ಡದಾರಿ ಹಿಡಿಯುತ್ತಿದ್ದಾರೆ. ಸಮಾಜದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ಭ್ರೂಣಹತ್ಯೆಯಂತಹ ಘಟನೆಗಳು ನಡೆಯುತ್ತಲೇ ಇವೆ. ಇಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸನ್ಮಾರ್ಗದ ದಾರಿ ಕಲಿಸಬೇಕು ಎಂದು ಕಿವಿಮಾತು ಹೇಳಿದರು. 

ಮಂಡಳಿಯ ರಾಜ್ಯಾಧ್ಯಕ್ಷೆ ವಿನಯಾ ಆರ್‌. ರಾಯ್ಕರ್‌, ವಿಜಯಾ ಶಂಕರ್‌ ವಿಠ್ಠಲ್‌ಕರ್‌ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಶ್ವವಿದ್ಯಾಲಯ ಮಾಜಿ ಉಪಕುಲಪತಿ ಡಾ| ಸುಧಾರಾವ್‌, ರಾಮ್‌ರಾವ್‌ ವಿ. ರಾಯ್ಕರ್‌, ಡಾ| ವೆಂಕಟೇಶ್‌ ಎ. ರಾಯ್ಕರ್‌, ಸತ್ಯನಾರಾಯಣ ರಾಯ್ಕರ್‌, ವಿನೋದಾ ರಾಯ್ಕರ್‌, ಪ್ರೇಮಾ ರಾಯ್ಕರ್‌ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next