Advertisement

Madras H C: ಮಾತಲ್ಲಿ ಹಿಡಿತವಿರಲಿ- ಸನಾತನ ವಿವಾದ ಸಂಬಂಧ ಮದ್ರಾಸ್‌ ಹೈಕೋರ್ಟ್‌ ಅಭಿಮತ

12:31 AM Sep 17, 2023 | Team Udayavani |

ಚೆನ್ನೈ/ಹೊಸದಿಲ್ಲಿ: “ಪ್ರತಿಯೊಂದು ಧರ್ಮವೂ ನಂಬಿಕೆಯಿಂದಲೇ ಸೃಷ್ಟಿಯಾಗಿದೆ. ನಂಬಿಕೆ ಎಂದರೆ ಅಲ್ಲಿ ತರ್ಕಕ್ಕೆ ಜಾಗವಿಲ್ಲ. ಹೀಗಾಗಿ ಧರ್ಮದ ವಿಚಾರಕ್ಕೆ ಬಂದಾಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸುವಾಗ ಯಾರಿಗೂ ನೋವಾಗದಂತೆ, ಯಾರ ಭಾವನೆಗೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಮುಕ್ತ ಅಭಿವ್ಯಕ್ತಿಯು ದ್ವೇಷ ಭಾಷಣ ಆಗಬಾರದು.’
ಇಂಥದ್ದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿ ರುವುದು ಮದ್ರಾಸ್‌ ಹೈಕೋರ್ಟ್‌. ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಅವರ “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂಬ ಹೇಳಿಕೆಯು ರಾಜಕೀಯ ವಿವಾದ ಸೃಷ್ಟಿಸಿರುವಂತೆಯೇ ಮದ್ರಾಸ್‌ ಉಚ್ಚ ನ್ಯಾಯಾಲಯದಿಂದ ಇಂಥದ್ದೊಂದು ಅಭಿಪ್ರಾಯ ಹೊರಬಿದ್ದಿದೆ.

Advertisement

“ಸನಾತನಕ್ಕೆ ವಿರೋಧ’ ಎಂಬ ವಿಷಯದ ಬಗ್ಗೆ ಮಾತನಾಡುವಂತೆ ಸ್ಥಳೀಯ ಕಾಲೇಜೊಂದು ವಿದ್ಯಾರ್ಥಿಗಳಿಗೆ ಕಳುಹಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಇಳಂಗೋವನ್‌ ಎಂಬವರು ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಎನ್‌.ಶೇಷಸಾಯಿ ಅವರು, ಅಭಿವ್ಯಕ್ತಿಯ ಹೆಸ ರಲ್ಲಿ ದ್ವೇಷದ ಮಾತುಗಳು ಸಲ್ಲ ಎಂದು ಹೇಳಿದ್ದಾರೆ.

“ಸನಾತನ ಧರ್ಮ ಎನ್ನುವುದು ಶಾಶ್ವತ ಕರ್ತವ್ಯಗಳ ಒಂದು ಗೊಂಚಲಿದ್ದಂತೆ. ಅದರಲ್ಲಿ ದೇಶಕ್ಕಾಗಿ ಸಲ್ಲಿಸುವ ಸೇವೆ, ರಾಜನಿಗಾಗಿ ಮಾಡುವ ಕೆಲಸ, ಹೆತ್ತವರು ಮತ್ತು ಗುರುಗಳಿಗೆ ಮಾಡುವ ಕರ್ತವ್ಯ, ಬಡವರು ಸೇರಿದಂತೆ ಇತರರ ಬಗೆಗಿನ ಕಾಳಜಿಯೂ ಸೇರುತ್ತದೆ. ಈ ಕರ್ತವ್ಯಗಳನ್ನು ನಾವು ನಾಶ ಮಾಡಲು ಸಾಧ್ಯವೇ? ನಾಗರಿಕನು ತನ್ನ ದೇಶವನ್ನು ಪ್ರೀತಿಸುವುದು ತಪ್ಪೇ? ಹೆತ್ತವರನ್ನು ಕಾಳಜಿಯಿಂದ ನೋಡಿಕೊಳ್ಳುವುದು ತಪ್ಪೇ?’ ಎಂದು ಅವರು ಪ್ರಶ್ನಿಸಿದ್ದಾರೆ.

ಕೆಲವು ಕಡೆ, ಸನಾತನ ಧರ್ಮವು ಕೇವಲ ಜಾತಿವಾದ ಮತ್ತು ಅಸ್ಪೃಶ್ಯತೆಗೆ ಸಂಬಂಧಿಸಿದ್ದು ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಸನಾತನ ಧರ್ಮದ ವ್ಯಾಪ್ತಿ ಯಲ್ಲಿ ಅಸ್ಪೃಶ್ಯತೆ ಬರುವುದಿದ್ದರೂ, ಅದು ಇಂದಿನ ಕಾಲಕ್ಕೆ ಸೂಕ್ತವಲ್ಲ. ದೇಶದ ಪ್ರತೀ ನಾಗರಿಕನೂ ಸಂವಿಧಾನವನ್ನು ಗೌರವಿಸಬೇಕು ಮತ್ತು ಪಾಲಿಸಬೇಕು. ಸಂವಿಧಾನದಲ್ಲೇ ಅಸ್ಪೃಶ್ಯತೆ ನಿರ್ಮೂಲನೆ ಬಗ್ಗೆ ಘೋಷಿ ಸಲಾಗಿದೆ ಎಂದೂ ನ್ಯಾ| ಶೇಷಸಾಯಿ ಹೇಳಿದ್ದಾರೆ.

1971ರಲ್ಲಿ ತಮಿಳುನಾಡಿನಲ್ಲಿ ಭಗವಾನ್‌ ಶ್ರೀರಾಮನಿಗೆ ಅವಮಾನವಾದರೂ ಸನಾತನ ಧರ್ಮವು ಹಿಂಸಾತ್ಮಕ ಪ್ರತಿಕ್ರಿಯೆ ನೀಡಲಿಲ್ಲ. ಬೇರೆ ಧರ್ಮದ ಮೇಲೆ ಇಂಥ ದಾಳಿ ನಡೆದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಿ. ಸಚಿವ ಸ್ಥಾನದಲ್ಲಿರುವವರು ಜವಾಬ್ದಾರಿ ಅರಿತು ಮಾತಾಡಬೇಕು.
ನಿರ್ಮಲಾ ಸೀತಾರಾಮನ್‌, ವಿತ್ತ ಸಚಿವೆ

Advertisement

ಸನಾತನ ಎಂದರೆ ಈ ದೇಶದ ಜನರು. ಸನಾತನ ಧರ್ಮವು ಸದಾ ಅಸ್ತಿತ್ವದಲ್ಲಿತ್ತು ಮತ್ತು ಮುಂದೆಯೂ ಅಸ್ತಿತ್ವದಲ್ಲಿರುತ್ತದೆ. ನಾವುಗಳು ಇರದಿದ್ದರೂ ಸನಾತನ ಧರ್ಮ ಇಲ್ಲೇ ಇರುತ್ತದೆ.
ರಣದೀಪ್‌ ಸಿಂಗ್‌ ಸುರ್ಜೇವಾಲ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

“ಮೊದಲು ಸನಾತನದ ಅರ್ಥ ತಿಳಿಯಿರಿ”
ಪುಣೆ: “ಸನಾತನ ಧರ್ಮವನ್ನು ನಿರ್ಮೂಲನೆ ಮಾಡುತ್ತೇನೆ ಎಂದು ಹೇಳುವವರು, ಈ ರೀತಿ ಹೇಳಿಕೆ ನೀಡುವ ಮೊದಲು ಅದರ ಅರ್ಥವನ್ನು ತಿಳಿದುಕೊಳ್ಳಬೇಕು’ ಎಂದು ಆರ್‌ಎಸ್‌ಎಸ್‌ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್‌ ವೈದ್ಯ ಹೇಳಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಆರ್‌ಎಸ್‌ಎಸ್‌ ಸಮನ್ವಯ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೆಲವರು ಸನಾತನ ಧರ್ಮವನ್ನು ನಾಶಪಡಿಸುತ್ತೇವೆ ಎಂದು ಹೇಳುತ್ತಾರೆ. ಮೊದಲು ಸನಾತನದ ಅರ್ಥವನ್ನು ಅವರು ತಿಳಿದುಕೊಳ್ಳಲಿ.

ಸನಾತನ ಪದದ ಅರ್ಥ ಶಾಶ್ವತ, ಎಂದೆಂದಿಗೂ ಇರುವಂಥದ್ದು. ಇದು ಭಾರತದ ಆಧ್ಯಾತ್ಮಿಕ ಜೀವನಶೈಲಿಯ ಆಧಾರವಾಗಿದೆ ಮತ್ತು ಆಂತರಿಕವಾಗಿ ಸಮಗ್ರವಾಗಿದೆ. ಇದರಿಂದಾಗಿ ಭಾರತದ ವ್ಯಕ್ತಿತ್ವ ರೂಪುಗೊಂಡಿದೆ’ ಎಂದಿದ್ದಾರೆ. “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂಬ ಡಿಎಂಕೆ ನಾಯಕರಾದ ಉದಯನಿಧಿ ಸ್ಟಾಲಿನ್‌ ಹಾಗೂ ಎ.ರಾಜಾ ಹೇಳಿಕೆಗೆ ಪ್ರತಿಕ್ರಿಯಿಸಿದ ಮನಮೋಹನ್‌ ವೈದ್ಯ, “ಇದೊಂದು ರಾಜಕೀಯ ಪ್ರೇರಿತ ಹೇಳಿಕೆಯಾಗಿದೆ. ಇತಿಹಾಸದಲ್ಲಿ ಅನೇಕರು ಸನಾತನ ಧರ್ಮ ನಾಶಪಡಿಸಲು ಪ್ರಯತ್ನಿಸಿದರು. ಆದರೆ ಯಾರಿಗೂ ಸಾಧ್ಯವಾಗಲಿಲ್ಲ. ಧರ್ಮಕ್ಕೆ ಸಂಕಷ್ಟ ಬಂದಾಗಲೆಲ್ಲ, ಧರ್ಮವನ್ನು ಸ್ಥಾಪಿಸಲು ಭಗವಂತ ಶ್ರೀಕೃಷ್ಣ ಅವತರಿಸುವುದಾಗಿ ಹೇಳಿದ್ದಾನೆ. ಈ ಪಥವನ್ನು ಆರ್‌ಎಸ್‌ಎಸ್‌ ಅನುಸರಿಸುತ್ತಿದೆ’ ಎಂದು ಹೇಳಿದ್ದಾರೆ. ಇನ್ನೊಂದೆಡೆ, “ಯಾವುದೇ ರಾಷ್ಟ್ರಕ್ಕೆ ಎರಡು ಹೆಸರುಗಳಿಲ್ಲ. ಭಾರತ ಹೆಸರಿಗೆ ನಾಗರಿಕ ಮೌಲ್ಯವಿದೆ. ಹೀಗಾಗಿ ಭಾರತ ಎಂದೇ ಕರೆಯಬೇಕು’ ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next