Advertisement

ವಿದೇಶದಿಂದ ಮರಳುವವರ ಮೇಲೆ ನಿಗಾ

05:11 PM May 07, 2020 | Suhan S |

ಹಾವೇರಿ: ಉದ್ಯೋಗ, ವ್ಯಾಸಂಗಕ್ಕಾಗಿ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ಮರಳಿ ಕರೆತರುವ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲೆಗೆ ಮರಳುವವರನ್ನು ಸರ್ಕಾರದ ಮಾರ್ಗಸೂಚಿಯಂತೆ ತಪಾಸಣೆ, ಕ್ವಾರಂಟೈನ್‌ ನಿಗಾಕ್ಕೆ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಎಲ್ಲ ತಹಶೀಲ್ದಾರ್‌ಗೆ ಸೂಚಿಸಿದರು.

Advertisement

ಈ ಕುರಿತಂತೆ ಅವರು ಬುಧವಾರ ಜಿಲ್ಲೆಯ ಎಲ್ಲ ತಹಶೀಲ್ದಾರರೊಂದಿಗೆ ವಿಡಿಯೋ ಸಂವಾದ ನಡೆಸಿದರು. ವಿದೇಶದಲ್ಲಿರುವ ಭಾರತೀಯರು ಹಡಗು, ವಿಮಾನಗಳ ಮೂಲಕ ಮರಳಿ ಸ್ವದೇಶಕ್ಕೆ ಬರಲಿದ್ದಾರೆ. ರಾಜ್ಯಕ್ಕೆ ಅಂದಾಜು 10,800 ಜನ ಮರಳಲಿದ್ದಾರೆ. ಇದರಲ್ಲಿ ಜಿಲ್ಲೆಗೆ ಹಿಂತಿರುಗುವವರ ಸಂಖ್ಯೆಯನ್ನು ರಾಜ್ಯ ಸರ್ಕಾರದಿಂದ ರವಾನೆಯಾಗಲಿದೆ. ಈ ಪ್ರಯಾಣಿಕರು ಜಿಲ್ಲೆಗೆ ಪ್ರವೇಶ ಮಾಡುವ ಮುನ್ನ ಗಡಿ ಭಾಗದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸೂಕ್ತ ತಪಾಸಣೆ ಹಾಗೂ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದರು.

ವಿಮಾನದ ಮೂಲಕ ಬೆಂಗಳೂರು ಹಾಗೂ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರನ್ನು ಏರ್‌ ಪೋರ್ಟ್‌ನಲ್ಲೇ ತಪಾಸಣೆ ನಡೆಸಲಿದ್ದಾರೆ. ತಪಾಸಣೆ ಸಂದರ್ಭದಲ್ಲಿ ಜ್ವರ, ಕೆಮ್ಮು, ಶೀತ, ಚಳಿಜ್ವರ, ತಲೆನೋವು, ಸುಸ್ತು, ಗಂಟಲು ಕೆರೆತ, ಉಸಿರಾಟದ ತೊಂದರೆ, ಮೈಕೈನೋವು, ಅತಿಸಾರ, ಎದೆನೋವು ಇತ್ಯಾದಿ ತೊಂದರೆಗಳಿಗೆ ಒಳಗಾಗಿರುವವರನ್ನು “ಎ’ ವರ್ಗ ಎಂದು ಗುರುತಿಸಿ ಅಲ್ಲಿಯೇ ಡಿ.ಸಿ.ಎಚ್‌.ಸಿ. ವರ್ಗಾಯಿಸಲಾಗುವುದು. ಪ್ರಥಮ ಪರೀಕ್ಷೆ ನೆಗಟಿವ್‌ ಆದಲ್ಲಿ ಐದರಿಂದ ಏಳು ದಿನಗಳ ನಡುವೆ ಎರಡು ಪರೀಕ್ಷೆಯನ್ನು ಹಾಗೂ 12ನೇ ದಿನಕ್ಕೆ ಮೂರನೇ ಪರೀಕ್ಷೆಯನ್ನು ನಡೆಸಿ ಅದು ನೆಗಟಿವ್‌ ಬಂದಲ್ಲಿ ಅವರನ್ನು ಸಂಬಂಧಪಟ್ಟ ಜಿಲ್ಲೆಗೆ ಏಳು ದಿನಗಳ ಗೃಹ ಪ್ರತ್ಯೇಕತೆ ಷರತ್ತಿಗೊಳಪಟ್ಟು ಕಳುಹಿಸಿಕೊಡಲಾಗುತ್ತದೆ. ಇದಲ್ಲದೆ ವಿದೇಶದಿಂದ ಬರುವ 60 ವರ್ಷ ಮೇಲ್ಪಟ್ಟವರನ್ನು ಜಿಲ್ಲೆಯಲ್ಲಿ ತಪಾಸಣೆ ಮಾಡಿ ಸಾಂಸ್ಥಿಕ ಕ್ವಾರೈಂಟೆನ್‌ ಮಾಡಬೇಕು ಹಾಗೂ 60 ವರ್ಷದೊಳಗಿನವರನ್ನು ಯಾವುದೇ ರೋಗ ಲಕ್ಷಣ ಇಲ್ಲದವರನ್ನು ತಪಾಸಣೆ ನಡೆಸಿ ನೇರವಾಗಿ ಅವರ ಮನೆಗೆ ಕಳುಹಿಸಿ ಗೃಹಪ್ರತ್ಯೇಕತೆಯಲ್ಲಿ ಇರಿಸಬೇಕು. ಇದಕ್ಕಾಗಿ ಸರ್ಕಾರದ ಮಾರ್ಗಸೂಚಿಯಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಗಡಿ ಪ್ರವೇಶಕ್ಕೆ ಮುನ್ನ ಇವರನ್ನು ಚೆಕ್‌ಪೋಸ್ಟ್‌ ಪ್ರದೇಶದ ಸ್ಥಳದಲ್ಲಿ ಕಡ್ಡಾಯವಾಗಿ ಪಲ್ಸ್‌ ಆಕ್ಸಿಮೀಟರ್‌ ಬಳಸಿ ಪರೀಕ್ಷೆ ಮಾಡಬೇಕು. ಕಡ್ಡಾಯವಾಗಿ ಇವರ ಮೊಬೈಲ್‌ನಲ್ಲಿ ಕೋವಿಡ್‌ ಆರೋಗ್ಯ ಸೇತು ಆ್ಯಪ್‌, ಕೋವಿಡ್‌ ಕ್ವಾರೈಂಟೆನ್‌ ವಾಚ್‌ ಆ್ಯಪ್‌ ಹಾಗೂ ಆಪ್ತಮಿತ್ರ ಆ್ಯಪ್‌ ಸೇರಿದಂತೆ ಮೂರು ಆ್ಯಪ್‌ಗ್ಳನ್ನು ಕಡ್ಡಾಯವಾಗಿ ಡೌನ್‌ ಲೋಡ್‌ ಮಾಡಿಕೊಂಡು ಮಾಹಿತಿ ತುಂಬಿದ್ದಾರಾ ಎಂಬುದನ್ನು ಪರಿಶೀಲನೆ ಮಾಡಬೇಕು. ಸ್ವಘೋಷಣಾ ಅರ್ಜಿಯನ್ನು ಪರಿಶೀಲಿಸಬೇಕು. ಈ ಮೂರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳದಿದ್ದರೆ ಸ್ಥಳದಲ್ಲೇ ಡೌನ್‌ ಲೋಡ್‌ ಮಾಡಿಕೊಳ್ಳಲು ತಿಳಿಸಬೇಕು. ಇದಕ್ಕಾಗಿ ಐಟಿ ಸಿಬ್ಬಂದಿಯೊಬ್ಬವರನ್ನು ಚೆಕ್‌ ಪೋಸ್ಟ್‌ಗಳಲ್ಲಿ ನೇಮಕ ಮಾಡಬೇಕು. ತಪಾಸಣೆಗೆ ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಜಿಲ್ಲೆಯೊಳಗೆ ಬರುವ ಪ್ರತಿ ವಿದೇಶಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಎಡಮುಂಗೈ ಮೇಲೆ ಕ್ವಾರಂಟೈನ್‌ ಕುರಿತಂತೆ ಸೀಲ್‌ ಹಾಕಬೇಕು ಎಂದು ಸೂಚಿಸಿದರು.

ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಹಗುರವಾಗಿ ಪರಿಗಣಿಸಬಾರದು. ಗಂಭೀರವಾಗಿ ತಪಾಸಣೆ ಮಾಡಬೇಕು ಎಂದು ಸೂಚನೆ ನೀಡಿದರು. ಚೆಕ್‌ ಪೋಸ್ಟ್‌ಗಳಿಗೆ ಅಗತ್ಯವಾದ ವೈದ್ಯಕೀಯ ತಂಡ, ಐಟಿ ತಂಡ, ತಪಾಸಣಾ ತಂಡ, ಹೋಂ ಕ್ವಾರಂಟೈನ್‌ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ಗೆ ಸಿದ್ಧತೆ ಮಾಡಿಕೊಳ್ಳುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು. ಚೆಕ್‌ಪೋಸ್ಟ್‌ಗೆ ಅಗತ್ಯವಾದ ಸಿಬ್ಬಂದಿ, ಪೊಲೀಸ್‌ ವೈದ್ಯಾಧಿಕಾರಿಗಳು, ಮಾಹಿತಿ ತಂತ್ರಜ್ಞಾನ ಉಳ್ಳವರನ್ನು ನೇಮಕ ಮಾಡಿಕೊಳ್ಳಲು ಸೂಚನೆ ನೀಡಿದರು. ವಿದೇಶದಿಂದ ಬರುವವರನ್ನು ಸಾಂಸ್ಥಿಕ ಕ್ವಾರೈಂಟೆನ್‌ ಮಾಡಿಕೊಳ್ಳುವ ಅವಶ್ಯ ಕಂಡುಬಂದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು.

Advertisement

ವಿಡಿಯೋ ಸಂವಾದದಲ್ಲಿ ಉಪ ವಿಭಾಗಾಧಿಕಾರಿಗಳಾದ ಡಾ| ದಿಲೀಷ್‌ ಶಶಿ, ಅನ್ನಪೂರ್ಣ ಮುದಕಮ್ಮನವರ, ವಿವಿಧ ತಾಲೂಕು ತಹಶೀಲ್ದಾರರು, ಕಾರ್ಮಿಕ ಇಲಾಖೆ ಅಧಿಕಾರಿ ಲಲಿತಾ ಸಾತೇನಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಂದ್ರ ದೊಡ್ಡಮನಿ, ತಹಶೀಲ್ದಾರ್‌ ಶಂಕರ ಜಿ.ಎಸ್‌. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next